ಅನ್ಯಾಯದ ವಿರುದ್ಧ ಪ್ರತಿಭಟಿಸದ ಪರಿಸ್ಥಿತಿ ನಿರ್ಮಾಣ : ಕೆ.ನೀಲಾ ವಿಷಾದ
'ವಾರ್ತಾಭಾರತಿ'ಯ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ
ಕಲಬುರಗಿ : ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಮಹಿಳೆಯ ಹಿಜಾಬ್ ಎಳೆದ ಪ್ರಕರಣ ನಡೆದಿದ್ದರೂ ಪ್ರತಿಭಟಿಸದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ವಿಷಾದ ವ್ಯಕ್ತಪಡಿಸಿದ್ದಾರೆ.
ಶನಿವಾರ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘ವಾರ್ತಾಭಾರತಿ’ ಕನ್ನಡ ದೈನಿಕದ ಕಲ್ಯಾಣ ಕರ್ನಾಟಕ ಆವೃತ್ತಿ, 23ನೇ ವಾರ್ಷಿಕ ವಿಶೇಷಾಂಕ, ಆಯ್ದ ಸಂಪಾದಕೀಯಗಳ ಸಂಗ್ರಹ ಹಾಗೂ ಕಲ್ಯಾಣ ಕರ್ನಾಟಕ ವಿಶೇಷ ಪುರವಣಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಹಿಜಾಬ್ ತೆಗೆಸಿದ, ಪಬ್‌ಗೆ ನುಗ್ಗಿ ಹುಡುಗಿಯರ ಮೇಲೆ ಹಲ್ಲೆ ನಡೆಸಿದ ಸಂದರ್ಭಗಳಲ್ಲಿ ಎಲ್ಲ ಚಿಂತಕರು ಬೀದಿಗೆ ಬರಬೇಕಿತ್ತು. ಸಜ್ಜನರ ಮಹಾಮೌನವೇ ದೊಡ್ಡ ಶತ್ರು, ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ. ಅದರಲ್ಲೂ ಮಾಧ್ಯಮಗಳ ಮೌನ ದೊಡ್ಡ ಅಪಾಯ ಎಂದು ನೀಲಾ ವಿಷಾದ ವ್ಯಕ್ತಪಡಿಸಿದರು.
ಧರ್ಮಸ್ಥಳದಲ್ಲಿ ಎಷ್ಟೊಂದು ಕೊಲೆಗಳಾಗಿವೆ. ಈಗಲೂ ನ್ಯಾಯ ಕೇಳುತ್ತಾ ಇದ್ದೇವೆ. ನಮಗೆ ನ್ಯಾಯ ಸಿಗುತ್ತಿಲ್ಲ. ಬೆಳ್ತಂಗಡಿ ಸುತ್ತಮುತ್ತ ಅನೇಕ ಹೋರಾಟ ಮಾಡಿದ್ದೇವೆ, ಪದ್ಮಲತಾ, ಸೌಜನ್ಯ ಅವರ ಸಾವಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲ ಎಂದು ಅವರು ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.