ಕಲಬುರಗಿ |ಸಕ್ಕರೆ ಕಾರ್ಖಾನೆ ಆರಂಭಿಸುವ ಮೊದಲು ಒಂದು ಟನ್ ಕಬ್ಬಿಗೆ 3,500 ರೂ. ದರ ಘೋಷಿಸಿ : ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಒತ್ತಾಯ
ಕಲಬುರಗಿ: ಆಳಂದ ತಾಲೂಕಿನ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಗಮನಿಸಿ, ಭೂಸನೂರಿನ ಬಳಿಯ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದು ನಡೆಸಲಾಗುತ್ತಿರುವ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯು ಉತ್ಪಾದನೆ ಆರಂಭಿಸುವ ಮೊದಲು ಒಂದು ಟನ್ ಕಬ್ಬಿಗೆ 3,500ರೂ.ದರ ಘೋಷಿಸಬೇಕು ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಒತ್ತಾಯಿಸಿದರು.
ಕಬ್ಬು ಬೆಳೆಗಾರರ ನಿಯೋಗದೊಂದಿಗೆ ಕಾರ್ಖಾನೆಗೆ ಭೇಟಿ ನೀಡಿದ ಗುತ್ತೇದಾರರು, ಕಾರ್ಖಾನೆ ಆಡಳಿತ ಮಂಡಳಿಗೆ ಬೇಡಿಕೆಗಳನ್ನು ಸಲ್ಲಿಸಿದರು. ಕಬ್ಬು ಕಟಾವು ಸಮಯದಲ್ಲಿ ತಾರತಮ್ಯ ಮಾಡಬಾರದು, ತೂಕದಲ್ಲಿ ಮೋಸ ನಡೆಯಬಾರದು ಮತ್ತು ಕಟಾವಿನ ಕ್ರಮದಲ್ಲಿ ಪಾರದರ್ಶಕತೆ ಇರಬೇಕು ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು. ಬೆಳಗಾವಿ ಭಾಗದ ಕಾರ್ಖಾನೆಗಳು ನೀಡುತ್ತಿರುವ ದರದಂತೆ ಇಲ್ಲಿಯೂ ದರ ನೀಡದಿದ್ದರೆ ತೀವ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಮಾತನಾಡಿದ ಎನ್‌ಎಸ್‌ಎಲ್ ಕಾರ್ಖಾನೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಭಾಸ್ಕರ್ ನಾಯ್ಡು, ಇತರ ಸಕ್ಕರೆ ಕಾರ್ಖಾನೆಗಳು ಮತ್ತು ಸರಕಾರದ ಮಾರ್ಗಸೂಚಿಗಳ ಪ್ರಕಾರವೇ ದರ ನಿಗದಿ ಮಾಡಲಾಗುತ್ತದೆ. ರೈತರ ಕಷ್ಟವನ್ನು ಗಮನಿಸಿ ಸಾಧ್ಯವಾದಷ್ಟು ಸಹಾಯ ಮಾಡುವ ಬಗ್ಗೆ ಯೋಚಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ ಗುತ್ತೇದಾರ ಅವರು ಈ ಉತ್ತರದಿಂದ ತೃಪ್ತರಾಗಲಿಲ್ಲ. ಬೆಳಗಾವಿ ಸಕ್ಕರೆ ಕಾರ್ಖಾನೆಗಳು ನೀಡುತ್ತಿರುವಂತೆ ಟನ್‌ಗೆ 3500 ರೂ. ದರ ಘೋಷಿಸಬೇಕು. ಬೆಲೆ ಸ್ಪಷ್ಟಪಡಿಸದೆ ಕಾರ್ಖಾನೆ ಆರಂಭಿಸುವುದನ್ನು ಬೆಳೆಗಾರರು ಒಪ್ಪುವುದಿಲ್ಲ. ಈ ಭಾಗದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಕಾರ್ಖಾನೆ ಆರಂಭಕ್ಕೂ ಮೊದಲು ದರ ಘೋಷಿಸಬೇಕು ಎಂದು ಬೇಡಿಕೆ ಇಟ್ಟರು.
ಸಭೆಯಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಪ್ರಕಾಶ್ ಸಣ್ಣಮನಿ, ಲಿಂಗರಾಜ್ ಪಾಟೀಲ್ ಝಳಕಿ, ಜಿಪಂ ಮಾಜಿ ಸದಸ್ಯ ಈರಣ್ಣ ಮಂಗಾಟೆ, ಬಾಬುಗೌಡ ಪಾಟೀಲ್, ಅಶೋಕ್ ಗುತ್ತೇದಾರ, ನಾಗರಾಜ ಶೇಗಜಿ, ದರ್ಗಾಶಿರೂರು ಮಲ್ಲಿನಾಥ ಘಂಟೆ, ರುದ್ರಯ್ಯಾ ಸ್ವಾಮಿ, ಶಂಕರ್ ಸೋಮಾ, ಶರಣಪ್ಪ ಮಲಶೇಟ್ಟಿ ಸೇರಿದಂತೆ ಹಲವು ಪ್ರತಿನಿಧಿಗಳು ಉಪಸ್ಥಿತರಿದ್ದರು.