ಯಾನಾಗುಂದಿ ಶ್ರೀಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧ: ಶರಣಪ್ರಕಾಶ್ ಪಾಟೀಲ್
ಯಾನಾಗುಂದಿ ಶ್ರೀಕ್ಷೇತ್ರದಲ್ಲಿ ಅನ್ನದಾಸೋಹ ಭವನ ಉದ್ಘಾಟನೆ
ಸೇಡಂ: ತಾಲೂಕಿನ ಯಾನಾಗುಂದಿಯ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಕ್ಷೇತ್ರವನ್ನು ಧಾರ್ಮಿಕ ಹಾಗೂ ಮೂಲಸೌಕರ್ಯಗಳ ದೃಷ್ಟಿಯಿಂದ ಸಮಗ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ಜಿಲ್ಲಾ ಪಂಚಾಯತ್ ಕಲಬುರಗಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 2025–26ನೇ ಸಾಲಿನ ಮುಖ್ಯಮಂತ್ರಿ ಮಾದರಿ ಅಭಿವೃದ್ಧಿ ಯೋಜನೆ (ಸಿಎಂಐಡಿಪಿ) ಅಡಿಯಲ್ಲಿ ಯಾನಾಗುಂದಿ ಗ್ರಾಮದ ಶ್ರೀ ಮಾತಾ ಮಾಣಿಕೇಶ್ವರಿ ಗುಡ್ಡದಲ್ಲಿ ನಿರ್ಮಿಸಲಾದ ಅನ್ನದಾಸೋಹ ಭವನವನ್ನು ಉದ್ಘಾಟಿಸಿ, ಹನುಮಾನ ದೇವಸ್ಥಾನದಿಂದ ಕೋಟಿ ಲಿಂಗ ಮುಖ್ಯದ್ವಾರದವರೆಗೆ ತಡೆಗೋಡೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾನಾಗುಂದಿ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಅನ್ನದಾಸೋಹ ಭವನ, ತಡೆಗೋಡೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ವಿವಿಧ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಿ, ಭಕ್ತರಿಗೆ ಇನ್ನಷ್ಟು ಅನುಕೂಲವಾಗುವಂತೆ ಮೂಲಸೌಕರ್ಯಗಳನ್ನು ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಯಾನಾಗುಂದಿ ಶ್ರೀಕ್ಷೇತ್ರವು ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಅದರ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಮಾತಾ ಮಾಣಿಕೇಶ್ವರಿ ದೇವಸ್ಥಾನದ ಮುಖ್ಯಸ್ಥ ಶಿವಯ್ಯ, ಸತೀಶರೆಡ್ಡಿ ಪಾಟೀಲ್ ರಂಜೋಳ್ ಸೇರಿದಂತೆ ವಿವಿಧ ಗಣ್ಯರು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.