×
Ad

Kalaburagi | ಪೋಕ್ಸೋ ಆರೋಪಿ ಪರಾರಿ ಪ್ರಕರಣ : ಅಫಜಲಪುರ ಪಿಎಸ್‌ಐ ಅಮಾನತು

Update: 2026-07-04 18:56 IST

ಕಲಬುರಗಿ : ಪೋಕ್ಸೋ ಪ್ರಕರಣದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಅಫಜಲಪುರ ಪೊಲೀಸ್ ಠಾಣೆಯ ಪಿಎಸ್‌ಐ ಸೋಮಲಿಂಗ ಒಡೆಯರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಆದೇಶ ಹೊರಡಿಸಿದ್ದಾರೆ.

ಬಾಲಕಿಯನ್ನು ಅಪಹರಿಸಿ ಪುಣೆಗೆ ಕರೆದೊಯ್ದಿದ್ದ ಆರೋಪದಡಿ ಮಂಜುನಾಥ ಇಂಗಳೆ (23) ಎಂಬಾತನನ್ನು ಬಂಧಿಸಿ ವಿಚಾರಣೆಗಾಗಿ ಠಾಣೆಗೆ ಕರೆತರಲಾಗಿತ್ತು. ವಿಚಾರಣೆ ನಡೆಯುತ್ತಿದ್ದ ವೇಳೆ ಪೊಲೀಸರ ಕಣ್ತಪ್ಪಿಸಿ ಆರೋಪಿ ಠಾಣೆಯಿಂದ ಪರಾರಿಯಾಗಿದ್ದ.

ಈ ಘಟನೆ ಬಳಿಕ ಕರ್ತವ್ಯ ಲೋಪದ ಆರೋಪದ ಮೇರೆಗೆ ಹೆಡ್ ಕಾನ್‌ಸ್ಟೆಬಲ್ ರವಿದಾಸ್ ಕಟ್ಟಿಮನಿ ಹಾಗೂ ಕಾನ್‌ಸ್ಟೆಬಲ್‌ಗಳಾದ ಶಿವಣ್ಣ ಮತ್ತು ಪ್ರಶಾಂತ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿತ್ತು. ಇದೀಗ ಇಲಾಖಾ ತನಿಖೆಯ ಬಳಿಕ ಪಿಎಸ್‌ಐ ಸೋಮಲಿಂಗ ಒಡೆಯರ್ ಅವರ ಮೇಲೂ ಅಮಾನತು ಕ್ರಮ ಕೈಗೊಳ್ಳಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಜಲಪುರ ವೃತ್ತದ ಸಿಪಿಐ ಲಖನ್ ಮಸಗುಪ್ಪಿ ಅವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಆರೋಪಿ ಪರಾರಿಯಾದ ತಕ್ಷಣ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಜಮೀನಿನಲ್ಲಿ ಅವಿತುಕೊಂಡಿದ್ದ ಮಂಜುನಾಥ ಇಂಗಳೆಯನ್ನು ಪತ್ತೆಹಚ್ಚಿ ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News