Jewargi | ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ದಿಢೀರ್ ಪರಿಶೀಲನೆ : ಕಾನೂನುಬಾಹಿರ ಚಟುವಟಿಕೆಗೆ ತೊಡಗದಂತೆ ಎಚ್ಚರಿಕೆ
ಜೇವರ್ಗಿ: ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜೇವರ್ಗಿ ಪೊಲೀಸರು ಶನಿವಾರ ಮುಂಜಾನೆ ರೌಡಿಶೀಟರ್‌ಗಳ ಮನೆಗಳ ಮೇಲೆ ವಿಶೇಷ ಪರಿಶೀಲನಾ ಕಾರ್ಯಾಚರಣೆ ನಡೆಸಿ, ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಚಟುವಟಿಕೆಯಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಜೇವರ್ಗಿ ವೃತ್ತ ನಿರೀಕ್ಷಕ (ಸಿಪಿಐ) ಬಾಪುಗೌಡ ಪಾಟೀಲ ಅವರ ನೇತೃತ್ವದಲ್ಲಿ ರೌಡಿ ನಿಗ್ರಹ ಪಡೆ ಹಾಗೂ ಜೇವರ್ಗಿ ಪೊಲೀಸ್ ಠಾಣೆಯ ಸಿಬ್ಬಂದಿ ಪಟ್ಟಣದ ವಿವಿಧ ಭಾಗಗಳಲ್ಲಿರುವ ರೌಡಿಶೀಟರ್‌ಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರ್ಯಾಚರಣೆಯ ವೇಳೆ ರೌಡಿಶೀಟರ್‌ಗಳು ಬಳಸುತ್ತಿರುವ ವಾಹನಗಳ ದಾಖಲೆಗಳು, ಅವುಗಳ ಕಾನೂನುಬದ್ಧ ಬಳಕೆ ಹಾಗೂ ಇತ್ತೀಚಿನ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು. ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದರು.
ಬೆದರಿಕೆ, ಹಲ್ಲೆ, ದಬ್ಬಾಳಿಕೆ, ಅಕ್ರಮ ವಸೂಲಿ ಸೇರಿದಂತೆ ಯಾವುದೇ ಅಪರಾಧಿಕ ಕೃತ್ಯಗಳಲ್ಲಿ ತೊಡಗಬಾರದು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಕಾನೂನು ಪಾಲನೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.
ಜೇವರ್ಗಿ ತಾಲೂಕಿನಲ್ಲಿ ಅಪರಾಧ ನಿಯಂತ್ರಣ, ಸಮಾಜಘಾತುಕ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಹಾಗೂ ಸಾರ್ವಜನಿಕರಲ್ಲಿ ಸುರಕ್ಷತಾ ಭಾವನೆ ಮೂಡಿಸುವ ಉದ್ದೇಶದಿಂದ ಇಂತಹ ನಿಗಾ ಮತ್ತು ಪರಿಶೀಲನಾ ಕಾರ್ಯಾಚರಣೆಗಳನ್ನು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಡೆಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.