Kalaburagi | ರೈತರು ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಾಯಿಸಲು ಮನವಿ
ಕಲಬುರಗಿ : 2026-27ನೇ ಸಾಲಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಬೆಳೆಗಳಾದ ತೊಗರಿ, ಹೆಸರು, ಉದ್ದು, ಹತ್ತಿ ಸೂಯಾ ಅವರೆ ಹಾಗೂ ಇತರೆ ಎಲ್ಲಾ ಬೆಳೆಗಳಿಗೆ ಬೆಳೆ ವಿಮೆಗಾಗಿ ನೋಂದಾಯಿಸಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹಾಗೂ ಜಂಟಿ ಕೃಷಿ ನಿರ್ದೇಶಕರಾದ ಸಮದ್ ಪಟೇಲ್ ಅವರು ತಿಳಿಸಿದ್ದಾರೆ.
ರೈತರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಹಣಿ, ಮೊಬೈಲ್ ಸಂಖ್ಯೆಯೊಂದಿಗೆ ತಮ್ಮ ಹತ್ತಿರದ ಪೋಸ್ಟ್ ಆಫೀಸ್, ಬ್ಯಾಂಕ್, ಗ್ರಾಮ್-ಒನ್ ಅಥವಾ ಸಿ.ಎಸ್.ಸಿ. ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಅಥವಾ ಇಂಡಸ್ ಇಂಡ್ ಜನರಲ್ ಇನ್ಸೂರೆನ್ಸ್ ಕಂಪನಿ (Indusind General Insurance Company) ಪ್ರತಿನಿಧಿಯನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕು. ಜಿಲ್ಲೆಯ ರೈತರು ಕೊನೆಯ ದಿನಾಂಕದವರೆಗೆ ಕಾಯದೇ, ಮುಂಚಿತವಾಗಿ ತಮ್ಮ ಬೆಳೆವಿಮೆ ನೋಂದಾಯಿಸಿಕೊಳ್ಳಬೇಕು.
ನಿರ್ಧರಿತ ಬೆಳೆಗಳ ವಿವರ ಹಾಗೂ ರೈತರು ಪ್ರತಿ ಹೆಕ್ಟೇರ್ ಗೆ ಪಾವತಿಸಬೇಕಾದ ಮೊತ್ತದ ವಿಮಾ ಮೊತ್ತದ ವಿವರ ಇಂತಿದೆ :
ಮೆಕ್ಕೆಜೋಳ (ಮಳೆ ಆಶ್ರಿತ) ಬೆಳೆಗೆ 1,350 ರೂ., ತೊಗರಿ (ನೀರಾವರಿ) ಬೆಳೆಗೆ 1,206 ರೂ., ತೊಗರಿ (ಮಳೆ ಆಶ್ರಿತ) 1,152 ರೂ., ಮೆಕ್ಕೆಜೋಳ (ನೀರಾವರಿ) ಬೆಳೆಗೆ 1,524 ರೂ., ಹತ್ತಿ (ನೀರಾವರಿ) ಬೆಳೆಗೆ 4320 ರೂ., ಹತ್ತಿ (ಮಳೆ ಆಶ್ರಿತ) 2,985 ರೂ., ಸಜ್ಜೆ (ಮಳೆ ಆಶ್ರಿತ) ಬೆಳೆಗೆ 696 ರೂ., ಎಳ್ಳು (ಮಳೆ ಆಶ್ರಿತ) ಬೆಳೆಗೆ 638 ರೂ., ಸೋಯಾಬೀನ್ (ಮಳೆ ಆಶ್ರಿತ) ಬೆಳೆಗೆ 944 ರೂ. ವಿಮಾ ಮೊತ್ತ ಇರುತ್ತದೆ. ಈ ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು 2026ರ ಜುಲೈ 31 ರಂದು ಕೊನೆಯ ದಿನವಾಗಿದೆ.
ಭತ್ತ (ನೀರಾವರಿ) ಬೆಳೆಗೆ 2,172 ರೂ., ಈರುಳ್ಳಿ (ನೀರಾವರಿ) 4,695 ರೂ., ಸೂರ್ಯಕಾಂತಿ (ಮಳೆ ಆಶ್ರಿತ) 964 ರೂ. ಬೆಳೆಗಳಿಗೆ ವಿಮಾ ಇದ್ದು, ಈ ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು 2026ರ ಆಗಸ್ಟ್ 14 ರಂದು ಕೊನೆಯ ದಿನವಾಗಿದೆ. ಹೆಸರುಕಾಳು (ಮಳೆ ಆಶ್ರಿತ) ಬೆಳೆಗೆ 794 ರೂ., ಉದ್ದು/ ಉದ್ದಿನಕಾಳು (ಮಳೆ ಆಶ್ರಿತ) ಬೆಳೆಗೆ 776 ರೂ.ಹಾಗೂ ಅರಿಶಿಣ ಬೆಳೆಗೆ 8210 ರೂ. ವಿಮಾ ಮೊತ್ತ ಇರುತ್ತದೆ. ಈ ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು 2026ರ ಜುಲೈ 15 ರಂದು ಕೊನೆಯ ದಿನವಾಗಿದೆ.
ಅತೀವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಕೃತಿ ವಿಕೋಪಗಳು ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರಿಗೆ ನೆರವಿಗೆ ಬರಲು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು 2026-27ನೇ ಸಾಲಿಗೆ ಸಹ ಜಾರಿಗೆ ತರಲಾಗಿದೆ.
ರೈತರು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಆಯಾ ತಾಲೂಕಿನ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರವನ್ನು ಹಾಗೂ ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.