×
Ad

ಹುಬ್ಬಳ್ಳಿ: ಬ್ಯಾಂಕ್ ದರೋಡೆಗೆ ಯತ್ನ; ಆರೋಪಿ ಬಂಧನ

Update: 2024-09-06 11:13 IST

ಆರೋಪಿ ಮಂಜುನಾಥ್‌ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳು

ಹುಬ್ಬಳ್ಳಿ: ಅಮರಗೋಳ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗೋಪನಕೊಪ್ಪ ನಿವಾಸಿ ಮಂಜುನಾಥ್ (28) ಬಂಧಿತ ಆರೋಪಿ. ಗುರುವಾರ ಸಾಯಂಕಾಲ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮುಖಕ್ಕೆ ಮಾಸ್ಕ್ ಹಾಕಿ ಬ್ಯಾಂಕ್ ನೌಕರರೊಬ್ಬರ ಕುತ್ತಿಗೆಗೆ ಚಾಕು ಹಿಡಿದು  10 ಲಕ್ಷ ರೂ. ಗೆ ಬೇಡಿಕೆಯಿಟ್ಟಿದ್ದ ಈತ, ನೌಕರನ ರಕ್ಷಣೆಗೆ ಬಂದವರನ್ನು ತಳ್ಳಿ ಪರಾರಿಯಾಗಿದ್ದ. ಈ ಕುರಿತು ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಎಪಿಎಂಸಿ ಪೊಲೀಸ್ ಠಾಣೆಯ ಪಿ ಐ ಸಮೀವುಲ್ಲಾ ಕೆ ಮತ್ತವರ ಸಿಬ್ಬಂದಿಯನ್ನೊಳಗೊಂಡ ತಂಡವು ಬ್ಯಾಂಕ್ ಸಿಬ್ಬಂದಿಯ ಸಹಾಯದಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ 5 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಯು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರಿಂದ ಈ ದರೋಡೆ ಕೃತ್ಯಕ್ಕೆ ಮುಂದಾಗಿರುವ ಬಗ್ಗೆ  ವಿಚಾರಣೆ ವೇಳೆ ತಿಳಿದು ಬಂದಿದ್ದು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಜರುಗಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News