ಸರ್ಫರಾಝ್ ಖಾನ್ ಗೆ ಮನವಿ ಮಾಡಲು ಫೋನ್ ಮಾಡಿದ್ದೆ; ಆಡಿಯೋ ಲೀಕ್ ಹೇಗಾಯ್ತು ಗೊತ್ತಿಲ್ಲ: ಶಾಸಕ ಬಿ.ಆರ್.ಪಾಟೀಲ್
ಬಿ.ಆರ್.ಪಾಟೀಲ್
ಕಲಬುರಗಿ : ಸಚಿವ ಝಮೀರ್ ಅಹ್ಮದ್ ಖಾನ್ ಅವರ ಆಪ್ತ ಸಹಾಯಕ ಸರ್ಫರಾಝ್ ಖಾನ್ ಅವರಿಗೆ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆಗಳ ಹಂಚಿಕೆ ವಿಚಾರವಾಗಿ ಒಂದು ಮನವಿಗಾಗಿ ನಾನು ಕರೆ ಮಾಡಿದ್ದೆ. ಆದರೆ ಆಡಿಯೊ ಲೀಕ್ ಹೇಗಾಯ್ತು ಅಂತ ಗೊತ್ತಿಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಶಾಸಕ ಬಿ.ಆರ್. ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಆಡಿಯೊ ವೈರಲ್ ವಿಚಾರವಾಗಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಫೋನ್‌ನಿಂದಲೇ ಸರ್ಫರಾಝ್ ಜೊತೆಗೆ ಮಾತನಾಡಿದ್ದೇನೆ. ಈ ಹಿಂದೆ ಹೇಳಿದ್ದರೂ ಮನೆಗಳು ಮಂಜೂರು ಆಗಿರಲಿಲ್ಲ. ಅದಕ್ಕೆ ಫೋನ್ ಮಾಡಿ ಮಾತನಾಡಿದ್ದೆ. ಸಚಿವ ಕೃಷ್ಣ ಬೈರೇಗೌಡರು ಹೇಳಿದಾಗ ಅದು ಅಷ್ಟು ಸೀರಿಯಸ್ ಆಗಲಿಲ್ಲ. ನನ್ ಆಡಿಯೊ ವಿಚಾರ ಯಾಕೆ ಇಷ್ಟು ಸಿರಿಯಸ್ ಆಗುತ್ತಿದೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ನಾನು ಬ್ಲ್ಯಾಕ್‌ಮೇಲ್ ಮಾಡಿ ಮಂತ್ರಿ ಆಗುವವನಲ್ಲ ಎಂದರು.
ನಾವು ನಿಗಮಕ್ಕೆ ನಾಲ್ಕು ಲೆಟರ್ ಗಳು ಕೊಟ್ಟು ಕೊಟ್ಟು ಸುಸ್ತಾಗಿದ್ದೆವು. ಯಾವುದೇ ಮನೆಗಳು ಮಂಜೂರು ಮಾಡಲಿಲ್ಲ. ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಅವರಿಗೆ ಮನೆ ಕೊಟ್ಟಿದ್ದರು. ಇದೇ ವಿಚಾರಕ್ಕೆ ನಾನು ಸರ್ಫರಾಝ್‌ಗೆ ಫೋನ್ ಮಾಡಿ ಮಾತಾಡಿದ್ದೇನೆ. ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಆಗಬೇಕು. ಅದೂ ಆಗಿಲ್ಲ. ಈ ಬಗ್ಗೆ ತನಿಖೆ ಮಾಡುವುದಾರೆ ಮಾಡಲಿ ಎಂದು ಅವರು ಹೇಳಿದರು.
ಯಾರ ಹೆಸರೂ ಪ್ರಸ್ತಾಪಿಸಿ ನಾನು ಮಾತನಾಡಿಲ್ಲ. ಆದರೆ ನಾನು ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ಮಾತಾಡಿದ್ದೇನೆ ಅಷ್ಟೇ. ಭ್ರಷ್ಟಾಚಾರವು ದೇಶದ ರಾಜಕೀಯದಾದ್ಯಂತ ಹರಡಿದೆ ಮತ್ತು ಅದಕ್ಕೆ ದೊಡ್ಡ ಕ್ರಾಂತಿಯ ಅಗತ್ಯವಿದೆ ಎಂದ ಅವರು, ಈ ವಿಚಾರದ ಬಗ್ಗೆ ಸಿಎಂ, ಡಿಸಿಎಂ ಕರೆದಿಲ್ಲ. ಅವರು ಕರೆದರೆ ಖಂಡಿತ ಅವರ ಬಳಿ ಹೋಗಿ ಮಾತನಾಡುತ್ತೇನೆ ಎಂದು ಹೇಳಿದರು.
ನನ್ನ ಕ್ಷೇತ್ರದಲ್ಲೇ ನನಗೆ ಗೊತ್ತಿಲ್ಲದೆ ಕಾಮಗಾರಿಗಳು ನಡೆಯುತ್ತಿವೆ
ನನ್ನ ಕ್ಷೇತ್ರದಲ್ಲಿ ನನಗೆ ಗೊತ್ತಿಲ್ಲದೇ ಕೆಲವು ಸರಕಾರಿ ಕಾಮಗಾರಿ ನಡೆಯುತ್ತಿವೆ. ಇದು ನನ್ನ ಕ್ಷೇತ್ರದಲ್ಲಿ ಶಿಷ್ಟಾಚಾರದ ಉಲ್ಲಂಘಟನೆ ಆಗುತ್ತಿದೆ ಎಂದು ಆಳಂದ ಶಾಸಕ ಬಿ.ಆರ್ ಪಾಟೀಲ್ ಆರೋಪಿಸಿದ್ದಾರೆ.
ನನ್ನ ಕ್ಷೇತ್ರಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 17 ಕೋಟಿ ರೂ.ಬಂದಿದೆ. ಕಾಮಗಾರಿಯೂ ಶುರುವಾಗಿದೆ. ಆದರೆ ಶಿಲಾನ್ಯಾಸಕ್ಕೆ ನನಗೆ ಕರೆದಿಲ್ಲ. ಇಲ್ಲಿ ಸ್ಪಷ್ಟವಾಗಿ ಶಿಷ್ಠಾಚಾರದ ಉಲ್ಲಂಘನೆಯಾಗಿದೆ. ಒಬ್ಬ ಶಾಸಕನಾಗಿ ಹಣ ಬಂದಿರುವುದು, ಕೆಲಸ ಶುರುವಾಗಿರುವುದು ನನಗೆ ಗೊತ್ತಿಲ್ಲ ಎಂದು ತಮ್ಮದೇ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಕೆಆರ್ ಡಿಬಿಯಿಂದ ಆಳಂದದಲ್ಲಿ ಮೌಲಾನಾ ಅಬ್ದುಲ್ ಕಲಾಂ ಆಝಾದ್ ವಸತಿ ಶಾಲೆ ಕಟ್ಟುತ್ತಿದ್ದೇವೆ. ಈಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮತ್ತೆ 17 ಕೋಟಿ ರೂ. ಬಂದಿದೆ. ಇಲಾಖೆಯಿಂದ ಈ ರೀತಿ ಹಣ ಕೊಡುವುದಾದರೆ ನಾನ್ಯಾಕೆ ಕೆಕೆಆರ್‌ಡಿಬಿಯಿಂದ ತೆಗೆದುಕೊಳ್ಳುತ್ತಿದ್ದೆ. ಇದೇ ಮಂಡಳಿಯ ಹಣ ನಾನು ಬೇರೆ ಕೆಲಸಕ್ಕಾದರೂ ಬಳಸಿಕೊಳ್ಳುತ್ತಿದ್ದೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.