ʼಅಧಿಕಾರ ಸಿಕ್ಕರೆ ಮೀಸಲಾತಿ ಬೇಕು ಎನ್ನುವವರನ್ನು ಜೈಲಿಗೆ ಹಾಕ್ತೇನೆʼ : ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಹೇಳಿಕೆ ವೈರಲ್
ಕಲಬುರಗಿ : ʼಅಧಿಕಾರ ಸಿಕ್ಕರೆ ಮೀಸಲಾತಿ ಬೇಕು ಎನ್ನುವವರನ್ನು ಜೈಲಿಗೆ ಹಾಕ್ತೇನೆʼ ಎಂದು ಹೇಳಿಕೆ ನೀಡಿದ್ದ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ವಿಡಿಯೋದಲ್ಲಿ ಏನಿದೆ? :
‘ಮಣಿಕಂಠ ರಾಠೋಡ್ ಬಿಜೆಪಿ’ ಎಂಬ ಫೇಸ್‌ಬುಕ್ ಪೇಜ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮೀಸಲಾತಿ ಕುರಿತಾಗಿ ನೀಡಿರುವ ಹೇಳಿಕೆ ವ್ಯಾಪಕವಾಗಿ ಹರಿದಾಡುತ್ತಿದೆ.
ನನಗೆ ಪ್ರಧಾನಿ ಆಗಲು ಅವಕಾಶ ಸಿಕ್ಕರೆ ಅದೆಂತ ಚಮತ್ಕಾರ ಮಾಡುತ್ತೇನೆಂದರೆ ಅಮೆರಿಕಾ, ಬ್ರಿಟನ್ ದೇಶದ ಜನರು ಬಂದು ಭಾರತೀಯ ಪೌರತ್ವ ಕೇಳಬೇಕು. ಇದು ಸಾಧ್ಯವಾಗಿಸಲು ದೇಶದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಾಗಿದೆ. ಕೇವಲ ಬಡವರಿಗಷ್ಟೇ ಮೀಸಲಾತಿ ಸಿಗಬೇಕು. ಜಾತಿ ಆಧಾರದಲ್ಲಿ ಮೀಸಲಾತಿ ರದ್ದಾಗಬೇಕು.
ದೇಶದಲ್ಲಿ ಜಾತಿಯ ಆಧಾರದಲ್ಲಿ ಮೀಸಲಾತಿ ಜಾರಿಯಲ್ಲಿದೆ. ಅದನ್ನು ಮೊದಲು ರದ್ದು ಮಾಡಬೇಕಾಗಿದೆ. ಇದರ ಬದಲಾಗಿ ಬಡವರಿಗೆ ಹಂಚಿಕೆ ಮಾಡುತ್ತೇನೆ. ಶ್ರೀಮಂತರಿಗೆ ಇದರ ಸೌಲಭ್ಯ ಸಿಗದ ಹಾಗೆ ಮಾಡುತ್ತೇನೆ. ಹೀಗೆ ಮಾಡಿದರೆ ಮುಂದಿನ ಹತ್ತು ವರ್ಷಗಳಲ್ಲಿ ಭಾರತ ವಿಶ್ವದಲ್ಲಿ ಪ್ರಕಾಶಿಸಲಿದೆ ಹಾಗೂ ಭಾರತೀಯ ರೂಪಾಯಿ ಮೌಲ್ಯ ಡಾಲರ್ ಗೂ ಹೆಚ್ಚಾಗಲಿದೆ ಎಂದಿದ್ದಾರೆ.
ನಾನು ಆ ಜಾತಿ ಈ ಜಾತಿ ಎಂದು ಹೇಳುವವರಿಗೆ ಭಾರತೀಯ ಪೌರತ್ವ ಕೊಡಬಾರದು. ಮೀಸಲಾತಿ ಬೇಕು ಎನ್ನುವವರನ್ನು ಜೈಲಿಗೆ ಹಾಕುತ್ತೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಮಣಿಕಂಠ ರಾಠೋಡ್ ಚಿತ್ತಾಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಅಲ್ಲದೆ ಹಲವು ವಿವಾದಗಳಲ್ಲಿ ಅವರು ಸಿಲುಕಿಕೊಂಡಿದ್ದರು.
ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಪ್ರಕರಣ :
ಆರೆಸ್ಸೆಸ್ ಕುರಿತಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ವೇಳೆ ಪತ್ರಿಕಾಗೋಷ್ಠಿಯಲ್ಲಿ, ಇಂದು ಬೆದರಿಕೆ ಕರೆಗಳು ಬರುತ್ತಿವೆ, ನಾಳೆ ನಿಮ್ಮ ಮನೆವರೆಗೂ ಬರಬಹುದು” ಎಂದು ಹೇಳಿದ್ದ ಹಿನ್ನೆಲೆಯಲ್ಲಿ, ಜೀವ ಬೆದರಿಕೆ ಆರೋಪದಡಿ ಮಣಿಕಂಠ ರಾಠೋಡ್ ವಿರುದ್ಧ ದೂರು ದಾಖಲಾಗಿತ್ತು.
ಇದೀಗ ಅವರ ಮೀಸಲಾತಿ ವಿರೋಧಿ ಹೇಳಿಕೆಗಳು ಸಂವಿಧಾನಬದ್ಧ ಹಕ್ಕುಗಳಿಗೆ ವಿರುದ್ಧವಾಗಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ.