ಕಲಬುರಗಿ | ಯುಜಿಸಿ ನಿಯಮಗಳ ಮೇಲೆ ಸುಪ್ರೀಂಕೋರ್ಟ್ ತಡೆ ತೆರವಿಗೆ ಆಗ್ರಹಿಸಿ ಫೆ.9ರಂದು ರಾಜ್ಯಾದ್ಯಂತ ಪ್ರತಿಭಟನೆ : ಡಿ.ಜಿ.ಸಾಗರ
ʼರೋಹಿತ್ ವೇಮುಲಾʼ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹ
ಕಲಬುರಗಿ : ಯುಜಿಸಿ ತಂದಿರುವ ನಿಯಮಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಯುಜಿಸಿ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಫೆ.9ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ರಾಜ್ಯ ಸಂಚಾಲಕ ಡಿ.ಜಿ.ಸಾಗರ ತಿಳಿಸಿದ್ದಾರೆ.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಸಿ ಹಾಗೂ ಎಸ್.ಟಿ ವಿದ್ಯಾರ್ಥಿಗಳ ಮೇಲೆ ವಿಶ್ವವಿದ್ಯಾಲಯಗಳಲ್ಲಿ ಧರ್ಮ ಹಾಗೂ ಜಾತಿ ಆಧಾರಿತವಾಗಿ ನಡೆಯುತ್ತಿರುವ ಕಿರುಕುಳ ಮತ್ತು ದೌರ್ಜನ್ಯಗಳನ್ನು ತಡೆಗಟ್ಟಲು ಯುಜಿಸಿ ತಂದಿರುವ ನಿಯಮಗಳನ್ನು ಸಮಿತಿ ಸ್ವಾಗತಿಸುತ್ತದೆ ಎಂದರು.
ಆದರೆ ಅವುಗಳ ಜಾರಿಗೆ ತಡೆಯಾಜ್ಞೆ ಇರುವುದರಿಂದ, ಈ ಕೂಡಲೇ ಅದನ್ನು ತೆರವುಗೊಳಿಸಿ ನಿಯಮಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ವಿಶ್ವವಿದ್ಯಾಲಯಗಳಲ್ಲಿ ದಲಿತ ವಿದ್ಯಾರ್ಥಿಗಳು ನಿರ್ಭಯವಾಗಿ ಶಿಕ್ಷಣ ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೊಳಿಸಬೇಕು. ಇತ್ತೀಚೆಗೆ ವಿವಿ ಕ್ಯಾಂಪಸ್‌ಗಳಲ್ಲಿ ಕೋಮುವಾದಿಕರಣ ಹೆಚ್ಚಾಗುತ್ತಿದ್ದು, ಇದರಿಂದ ದಲಿತ ವಿದ್ಯಾರ್ಥಿಗಳ ಮೇಲೆ ಕಿರುಕುಳ ಹೆಚ್ಚುವ ಸಾಧ್ಯತೆ ಇದೆ. ಭವಿಷ್ಯದ ಭಾರತದ ದೃಷ್ಟಿಯಿಂದ ಇಂತಹ ಕಾಯ್ದೆ ಜಾರಿಗೊಳಿಸುವುದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ರಾಜ್ಯ ಖಜಾಂಚಿ ಬಿ.ಸಿ. ವಾಲಿ, ಜಿಲ್ಲಾ ಮುಖಂಡರಾದ ಸುರೇಶ್ ಹಾದಿಮನಿ, ಹೆಚ್. ಶಂಕರ, ಉಮೇಶ್ ನರೋಣಾ, ಎಸ್.ಪಿ. ಸುಳ್ಳದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.