×
Ad

ಕಲಬುರಗಿ | ಐತಿಹಾಸಿಕ ಸ್ಮಾರಕಗಳ ಮಹತ್ವ ಅರಿಯುವಂತೆ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಕರೆ

Update: 2025-01-03 17:56 IST

ಕಲಬುರಗಿ : ಐತಿಹಾಸಿಕ ಸ್ಮಾರಕಗಳ ಇತಿಹಾಸ ಮತ್ತು ಅದರ ಮಹತ್ವ ಅರಿತು ಇತರರಿಗೂ ತಿಳಿಸುವ ಕೆಲಸ ವಿದ್ಯಾರ್ಥಿ ಸಮುದಾಯ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಬಿ.ಫೌಝಿಯಾ ತರನ್ನುಮ್ ಹೇಳಿದರು.

ಶುಕ್ರವಾರ ಕೆ.ಕೆ.ಆರ್.ಡಿ.ಬಿ, ಕಲಬುರಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಇಂಟ್ಯಾಕ್ ಸಂಸ್ಥೆಯ ಸಹಯೋಗದೊಂದಿಗೆ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಕಲಬುರಗಿ ಕೋಟೆ ವರೆಗೆ ಜರುಗಿದ ʼನಮ್ಮ ನಡೆ ಕೋಟೆ ಕಡೆʼ ಘೋಷವಾಕ್ಯದ ಪಾರಂಪರಿಕ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಐತಿಹಾಸಿಕ ಸ್ಮಾರಕಗಳು ನಮಗೆ ಹೆಮ್ಮೆ ಇದೆ. ಇಂತಹ ಸ್ಮಾರಕಗಳ ರಕ್ಷಣೆ ಜೊತೆಗೆ ಅಲ್ಲಿ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ 30 ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿ.ಪಿ.ಆರ್. ಸಿದ್ದಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರ್ಷ ಕೆ.ಕೆ.ಆರ್.ಡಿ.ಬಿ ಮಂಡಳಿ ಇಂತಹ ಪ್ರವಾಸಿ ತಾಣಗಳು ಸಂರಕ್ಷಣೆಗೆ 10 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಲಾಗುವುದು ಎಂದರು.

ಕೋಟೆವರೆಗೆ ವಾಕಥಾನ್ :

ಶ್ರೀ ಶರಣಬಸವೇಶ್ವರರ ದೇವಸ್ಥಾನದಿಂದ ಲಾಲಗೇರಿ ಕ್ರಾಸ್ ಮಾರ್ಗವಾಗಿ ಕಲಬುರಗಿ ಕೋಟೆವರೆಗೆ ಪಾರಂಪರಿಕೆ ನಡಿಗೆಯಲ್ಲಿ ವಿಶ್ವನಾಥ್ ರೆಡ್ಡಿ ಮುದ್ನಾಳ, ಜಿಮ್ಸ್ ಮೆಡಿಕಲ್ ಕಾಲೇಜ್, ಪಿ.ಡಿ.ಎ ಇಂಜಿನೀಯರಿಂಗ್ ಕಾಲೇಜ್, ಎಂ.ಆರ್.ಎಂ.ಸಿ ಮೆಡಿಕಲ್ ಕಾಲೇಜು, ಸೋಲಾಪುರದ ಬಸವೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಕೆ.ಸಿ.ಟಿ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ನಿವೃತ್ತ ಪ್ರಾಧ್ಯಾಪಕ ಡಾ.ಶಂಭುಲಿಂಗ ವಾಣಿ ಅವರು ನಡಿಗೆಯುದ್ದಕ್ಕೂ ಕೋಟೆ ಇತಿಹಾಸದ ಕುರಿತು ತಿಳಿಹೇಳಿದರು.

ಕಲಬುರಗಿ ಕೋಟೆಯೊಳಗಿನ ರಣಮಂಡಳ, ಜಾಮಿಯಾ ಮಸೀದಿ, ಕೋಟೆ ಸುತ್ತ ಕಂದಕ, ಆನೆಲಯ, ಗುಪ್ತದ್ವಾರ, ಪ್ರವೇಶ ದ್ವಾರ ಹೀಗೆ ನಾನಾ ಸ್ಥಳಗಳನ್ನು ವೀಕ್ಷಿಸಲಾಯಿತು.

ಇಂಟ್ಯಾಕ್ ಸಂಸ್ಥೆಯ ಡಾ.ಶಂಭುಲಿಂಗ ವಾಣಿ ಮಾತನಾಡಿ, 800 ವರ್ಷದ ಹಳೆಯ ಈ ಕೋಟೆ ರಾಜಾ ಗುಲಚಂದ್ ನಿರ್ಮಿಸಿದರು. 1346ರಲ್ಲಿ ಬಹಮನಿ ಸುಲ್ತಾನರು ಈ ಕೋಟೆ ವಶಪಡಿಸಿ ಅಧಿಕಾರ ಅರಂಭಿಸಿದರು. ಕೋಟೆ 3 ಕಿ.ಮೀ ಸುತ್ತಳತೆ ಇದ್ದು, ಶತ್ರುಗಳು ಬಾರದಂತೆ 15 ಅಡಿ ಅಳ, 30 ಅಡಿ ಅಗಲ ಸುತ್ತ ನೀರಿನ ಕಂದಕ ನಿರ್ಮಿಸಿ ನೀರಿನಲ್ಲಿ ಜಲಚರ ಪ್ರಾಣಿ ಬಿಡುತ್ತಿದ್ದರು. ಎರಡು ಗೋಡೆ ಒಳಗೊಂಡ 26 ತೋಪುಗಳಿವೆ. 8 ಗುಪ್ತ ದ್ವಾರಗಳಿವೆ ಎಂದ ಅವರು ಕಲಬುರಗಿ ಜೊತೆಗೆ ಎರಡನೇ ರಾಜಧಾನಿಯಾಗಿ ಫಿರೋಜಾಬಾದ ಘೋಷಿಸಿಕೊಂಡಿದ್ದರು ಎಂದು ಕೋಟೆ ಇತಿಹಾಸ ಹೇಳಿದರು.

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನುಸುಯಾ ಹೂಗಾರ, ಕೃಷಿ ಸಹಾಯಕ ನಿರ್ದೇಶಕ ಚಂದ್ರಕಾಂತ ಜೀವಣಗಿ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

 

 

 

 

 

 

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News