×
Ad

ಕಲಬುರಗಿ | ಸುಳ್ಳು ಮಾಹಿತಿ ನೀಡಿ ST ಜಾತಿ ಪ್ರಮಾಣ ಪತ್ರ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಯಲ್ಲಾಲಿಂಗ ದೊರೆ ಆಗ್ರಹ

Update: 2025-12-30 19:00 IST

ಕಲಬುರಗಿ : ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಪಂಗಡ (ST) ಜಾತಿ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರನ್ನು ಪ್ರಚೋದಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾ ಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಯಲ್ಲಾಲಿಂಗ ಬಿ.ಕೆ.ದೊರೆ ಆಗ್ರಹಿಸಿದ್ದಾರೆ.

ಜಿಲ್ಲಾ ವ್ಯಾಪ್ತಿಯಲ್ಲಿ ಕೆಲ ಹಿಂದುಳಿದ ವರ್ಗದ (ಕಬ್ಬಲಿಗ ಹಾಗೂ ಕೋಲಿ ಸಮಾಜ) ಮುಖಂಡರು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದು, ತಾವು ಕೂಡ ಪರಿಶಿಷ್ಟ ಪಂಗಡಕ್ಕೆ ಸೇರಿದ್ದೇವೆ ಎಂಬಂತೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲು ಜನರನ್ನು ಪ್ರಚೋದಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರದ ಸ್ಪಷ್ಟ ನಿರ್ದೇಶನದಂತೆ, ಹಿಂದುಳಿದ ವರ್ಗಗಳಲ್ಲಿಯೂ ತಳವಾರ ಹಾಗೂ ಪರಿವಾರ ಎಂಬ ಜಾತಿ ಹೆಸರುಗಳು ಇರುವುದು ಸತ್ಯವಾಗಿದ್ದು, ಇಂತಹ ವರ್ಗಕ್ಕೆ ಸೇರಿದವರಿಗೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡ (ST) ಜಾತಿ ಪ್ರಮಾಣ ಪತ್ರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ವಿಚಾರ ತಿಳಿದಿದ್ದರೂ ಸಹ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವುದು ಖಂಡನೀಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಕೃತ್ಯಗಳು ಮುಗ್ಧ ಜನರನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಪ್ರೇರೇಪಿಸುವುದಲ್ಲದೆ, ನೈಜ ಪರಿಶಿಷ್ಟ ಪಂಗಡದ ಸಮುದಾಯ ಮತ್ತು ಹಿಂದುಳಿದ ವರ್ಗಗಳ ನಡುವೆ ಅನಗತ್ಯ ಅಶಾಂತಿ ಹಾಗೂ ಸಾಮಾಜಿಕ ಅಸಮರಸ್ಯ ಉಂಟುಮಾಡುವ ಅಪಾಯಕಾರಿ ಪ್ರಯತ್ನವಾಗಿದೆ ಎಂದು ಎಚ್ಚರಿಸಿದರು.

ಈ ವಿಷಯವನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸುಳ್ಳು ಮಾಹಿತಿ ಪ್ರಸಾರ ಮಾಡುವ ಹಾಗೂ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಸ್ವಯಂಪ್ರೇರಿತ (ಸುವೋ-ಮೊಟೋ) ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ಜಿಲ್ಲೆಯ ಸಾಮಾಜಿಕ ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ಎಲ್ಲಾ ಸಮುದಾಯದ ಮುಖಂಡರನ್ನು ಒಳಗೊಂಡ ಶಾಂತಿ ಸಭೆಯನ್ನು ತಕ್ಷಣವೇ ಕರೆಯಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News