ಕಲಬುರಗಿ | ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಆರೋಪಿ ಆರ್.ಡಿ.ಪಾಟೀಲ್ ವರ್ಗಾವಣೆಗೆ ಜೈಲು ಅಧೀಕ್ಷಕಿಯಿಂದ ಡಿಐಜಿಗೆ ಪತ್ರ
ಆರ್.ಡಿ.ಪಾಟೀಲ್
ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್‌ನ ವರ್ತನೆಯಿಂದ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅಶಾಂತಿ ಹೆಚ್ಚಾಗಿದ್ದು, ಆತನನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಅನಿತಾ ಅವರು ಕಾರಾಗೃಹ ಇಲಾಖೆಯ ಡಿಐಜಿಗೆ ಪತ್ರ ಬರೆದಿದ್ದಾರೆ. ಇದರ ನಡುವೆಯೇ ಜೈಲಿನೊಳಗಿನಿಂದಲೇ ಆರ್.ಡಿ.ಪಾಟೀಲ್ ಬಿಡುಗಡೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ.
ಜೈಲು ಸಿಬ್ಬಂದಿ ಮೇಲೆ ಹಲ್ಲೆ ಆರೋಪ :
ಬ್ಯಾರಕ್ ತಪಾಸಣೆಗೆ ತೆರಳಿದ್ದ ಜೈಲು ಸಿಬ್ಬಂದಿ ಶಿವಕುಮಾರ್ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಫರಹತಾಬಾದ್ ಪೊಲೀಸರು ಆರ್.ಡಿ.ಪಾಟೀಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಎಡಿಜಿಪಿ ಅಲೋಕ್ ಕುಮಾರ್ ಅವರು ಕಾರಾಗೃಹ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಜೈಲಿನಲ್ಲಿ ಬಿಗಿ ನಿಯಮ ಜಾರಿಗೊಳಿಸಲಾಗಿದ್ದು, ಇದನ್ನು ವಿರೋಧಿಸಿ ಆರ್.ಡಿ.ಪಿ ಪದೇ ಪದೇ ಸಿಬ್ಬಂದಿ ಜತೆ ಸಂಘರ್ಷಕ್ಕಿಳಿಯುತ್ತಿದ್ದಾನೆ ಎನ್ನಲಾಗಿದೆ.
ಆರ್.ಡಿ.ಪಾಟೀಲ್ ವರ್ಗಾವಣೆಗೆ ಅಧೀಕ್ಷಕಿ ಪತ್ರ :
ಆರ್.ಡಿ.ಪಾಟೀಲ್ ಜೈಲಿನ ವಾತಾವರಣ ಹಾಳು ಮಾಡುತ್ತಿದ್ದು, ಇತರ ಕೈದಿಗಳಿಗೂ ತೊಂದರೆ ನೀಡುತ್ತಿದ್ದಾನೆ ಎಂದು ಉಲ್ಲೇಖಿಸಿ, ಅವನನ್ನು ತಕ್ಷಣ ಕಲಬುರಗಿಯಿಂದ ಬೇರೆ ಜೈಲಿಗೆ ವರ್ಗಾಯಿಸುವಂತೆ ಉತ್ತರ ವಲಯ (ಬೆಳಗಾವಿ) ಡಿಐಜಿಗೆ ಜೈಲು ಅಧೀಕ್ಷಕಿ ಪತ್ರ ಬರೆದಿದ್ದಾರೆ. ಆದರೆ ಹತ್ತು ದಿನ ಕಳೆದರೂ ಮೇಲಾಧಿಕಾರಿಗಳಿಂದ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.
ಜೈಲಾಧಿಕಾರಿಗಳ ವಿರುದ್ಧವೇ ಆರ್.ಡಿ.ಪಾಟೀಲ್ ಗಂಭೀರ ಆರೋಪ :
ವರ್ಗಾವಣೆ ಪ್ರಕ್ರಿಯೆ ಚರ್ಚೆಯಲ್ಲಿರುವ ನಡುವೆಯೇ, ಆರ್.ಡಿ.ಪಾಟೀಲ್ ತನ್ನ ಬೆಂಬಲಿಗರ ಮೂಲಕ ಜೈಲಿನೊಳಗಿನಿಂದಲೇ ವಿಡಿಯೋ ಬಿಡುಗಡೆ ಮಾಡಿಸಿದ್ದು, ಕೆಲ ಜೈಲಾಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ತನ್ನ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದಾರೆ ಎಂದು ಆತ ಆರೋಪಿಸಿದ್ದಾನೆ.