ಕಲಬುರಗಿ | ಈಶಾನ್ಯ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ; ಕ್ಷೇತ್ರದಾದ್ಯಂತ 31,214 ಮತದಾರರು: ಝಹೀರಾ ನಸೀಮ್
ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಅಂತಿಮ ಪಟ್ಟಿ ಮಂಗಳವಾರ ಪ್ರಕಟಿಸಲಾಗಿದ್ದು, 18,194 ಪುರುಷ ಮತ್ತು 13,020 ಮಹಿಳೆಯರು ಸೇರಿ ಒಟ್ಟು 31,214 ಮತದಾರರು ಹೆಸರು ನೋಮದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿರುವ ಝಹೀರಾ ನಸೀಮ್ ತಿಳಿಸಿದ್ದಾರೆ.
ಮತದಾರರ ಪಟ್ಟಿಯನ್ನು ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ, ಮಹಾನಗರ ಪಾಲಿಕೆ, ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರ ಕಚೇರಿಯಲ್ಲಿ ಸಾರ್ವಜನಿಕರು ಮತದಾರರ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನ.1ರ, 2025 ಅರ್ಹತಾ ದಿನವನ್ನಾಗಿ ಪರಿಗಣಿಸಿ ಅಂತಿಮ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. 16 ಕಿ.ಮೀ ಅಂತರದಲ್ಲಿ ಪ್ರತಿ ಮತಗಟ್ಟೆ ಇದ್ದು, ಕನಿಷ್ಠ 30 ಮತದಾರರು ಒಳಗೊಂಡಿರಬೇಕೆಂಬ ಮಾರ್ಗಸೂಚಿ ಹಿನ್ನೆಲೆಯಲ್ಲಿ ಮತದಾರರ ಸಂಖ್ಯೆ ಅನುಗುಣವಾಗಿ ಪ್ರಸ್ತುತ ಕ್ಷೇತ್ರದಾದ್ಯಂತ 145 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನೋಂದಣೆ ಪ್ರಕ್ರಿಯೆ ನಿರಂತರವಾಗಿರುವುದರಿಂದ ಮುಂದಿನ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಹೆಸರು ನೋಂದಾಯಿಸಲ್ಪಟ್ಟಿದಲ್ಲಿ ಚುನಾವಣಾ ಸಮಯದಲ್ಲಿ ಇದನ್ನು ಪರಿಷ್ಕರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯಲ್ಲಿ ಹೆಚ್ಚು ಮತದಾರರು :
ಇನ್ನು ಜಿಲ್ಲಾವಾರು ಮತದಾರರ ನೋಂದಣಿ ಅಂಕಿ-ಸಂಖ್ಯೆ ವೀಕ್ಷಿಸಿದಾಗ ಕಲಬುರಗಿ ಜಿಲ್ಲೆಯಲ್ಲಿ ಪುರುಷ 4,818 ಮಹಿಳೆ 4,118 ಸೇರಿ ಒಟ್ಟು 8,936 ರೊಂದಿಗೆ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರನ್ನು ಹೊಂದಿರುವ ಜಿಲ್ಲೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಪುರುಷ 1,398, ಮಹಿಳೆ 622 ಸೇರಿ 2,020 ಮತದಾರರಿದ್ದಾರೆ. ಉಳಿದಂತೆ ಬಳ್ಳಾರಿ ಜಿಲ್ಲೆಯಲ್ಲಿ ಪುರುಷ 1,775 ಮಹಿಳೆ 1,527 ಸೇರಿ 3,302, ವಿಜಯನಗರ ಜಿಲ್ಲೆಯಲ್ಲಿ ಪುರುಷ 2,114 ಮಹಿಳೆ 1,093 ಸೇರಿ 3,207, ಬೀದರ ಜಿಲ್ಲೆಯಲ್ಲಿ ಪುರುಷ 3,337 ಮಹಿಳೆ 2,793 ಸೇರಿ 6,130, ಕೊಪ್ಪಳ ಜಿಲ್ಲೆಯಲ್ಲಿ ಪುರುಷ 1,805 ಮಹಿಳೆ 857 ಸೇರಿ 2,662, ರಾಯಚೂರು ಜಿಲ್ಲೆಯಲ್ಲಿ ಪುರುಷ 2,947 ಮಹಿಳೆ 2,010 ಸೇರಿ 4,957 ಮತದಾರರಿದ್ದಾರೆ.
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಅಂತಿಮವಾಗಿದ್ದರು ಸಹ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸಲು ನಿಗದಿ ಮಾಡುವ ಕೊನೆಯ ದಿನದ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸುವರ್ಣಾವಕಾಶವಿದೆ. ಕಲಬುರಗಿ ವಿಭಾಗದ ಎಲ್ಲಾ ಜಿಲ್ಲಾಧಿಕಾರಿಗಳು, ಕಲಬುರಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರು, ಉಪ ವಿಭಾಗದ ಸಹಾಯಕ ಆಯುಕ್ತರು, ತಾಲೂಕಿನ ತಹಶೀಲ್ದಾರರನ್ನು ಸಹಾಯಕ ಮತದಾರರ ನೊಂದಣಾಧಿಕಾರಿಯಾಗಿದ್ದು, ಇಲ್ಲಿ ಅರ್ಹ ಮತದಾರರು(ಶಿಕ್ಷಕರು) ಅವಶ್ಯಕ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಕೊಳ್ಳುವ ಮೂಲಕ ಸುಭದ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಮತದಾರರ ನೊಂದಣಾಧಿಕಾರಿ ಝಹೀರಾ ನಸೀಮ್ ಮನವಿ ಮಾಡಿದ್ದಾರೆ.