ಕಲಬುರಗಿ: ಲೋಕಾಯುಕ್ತ ದಾಳಿ; 25 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ವಿಶೇಷ ಸಾರ್ವಜನಿಕ ಅಭಿಯೋಜಕನ ಬಂಧನ
ಕಲಬುರಗಿ: ದೌರ್ಜನ್ಯ ಪ್ರಕರಣದಲ್ಲಿ ಉತ್ತಮ ವಾದ ಮಾಡುವುದಕ್ಕಾಗಿ ಲಂಚದ ಬೇಡಿಕೆ ಇಟ್ಟಿರುವ ಕಲಬುರಗಿಯ 2ನೇ ಎಡಿಜೆ ನ್ಯಾಯಾಲಯದ ವಿಶೇಷ ಸಾರ್ವಜನಿಕ ಅಭಿಯೋಜಕರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು, 25 ಸಾವಿರ ರೂ. ನಗದು ಹಣ ವಶಕ್ಕೆ ಪಡೆದಿದ್ದಾರೆ.
ಕಲಬುರಗಿಯ 2ನೇ ಎಡಿಜೆ ನ್ಯಾಯಾಲಯದ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಜಮಹೇಂದ್ರ.ಜಿ. ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಆರೋಪಿಯು ದೂರುದಾರರಿಂದ ಒಟ್ಟು 50 ಸಾವಿರ ಲಂಚದ ಬೇಡಿಕೆ ಇಟ್ಟಿದ್ದನು. ಈ ಹಿಂದೆ 20 ಸಾವಿರ ರೂಪಾಯಿ ಲಂಚವನ್ನು ಸ್ವೀಕರಿಸಿದ್ದ ಎನ್ನಲಾಗಿದೆ, ಇಂದು(ಮಂಗಳವಾರ) 25 ಸಾವಿರ ರೂ. ನಗದು ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ತೆಲಂಗಾಣ ರಾಜ್ಯದ ವಿಕಾರಾಬಾದ್ ಜಿಲ್ಲೆಯ ಕಂದನುಲಿ ಗ್ರಾಮದ ನಿವಾಸಿ ನವೀನ್ ಎಂಬವರ ದೂರಿನ ಮೆರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶೀಲವಂತ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.