ಕಲಬುರಗಿ | ಕೋಲಿ ಸಮಾಜಕ್ಕೆ ಬಿಜೆಪಿ ಕೊಡುಗೆ ಏನು?: ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ್ ಪ್ರಶ್ನೆ
"ಪ್ರಧಾನಿ ಮೋದಿ, ಎನ್.ರವಿಕುಮಾರ್ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ"
ಕಲಬುರಗಿ: "ಡಬಲ್ ಎಂಜಿನ್ ಸರಕಾರ ಬಂದರೆ ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್.ರವಿಕುಮಾರ್ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ" ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಆರೋಪಿಸಿದ್ದಾರೆ.
ನಗರದ ಐವಾನ್ ಎ ಶಾಹಿ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7 ವರ್ಷಗಳ ಕಾಲ ಅಧಿಕಾರದಲ್ಲಿರುವ ಎಂಎಲ್ಸಿ ಎನ್.ರವಿಕುಮಾರ್ ಅವರು ಅಧಿಕಾರಕ್ಕೆ ಬಂದರೆ ಸೂರ್ಯ, ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಕೋಲಿ ಸಮಾಜವು ಕೂಡ ಎಸ್ಟಿ ಸೇರ್ಪಡೆ ಮಾಡುವುದು ಅಷ್ಟೇ ಸತ್ಯ ಎಂದು ಹೇಳಿದ್ದರು. ತಾವು ಬಿಜೆಪಿ ಸರ್ಕಾರವಿದ್ದಾಗ ಕೋಲಿ ಸಮಾಜಕ್ಕೆ ಏನು ಮಾಡಿದ್ದೀರಿ ಎನ್ನುವುದನ್ನು ಪ್ರಾಮಾಣಿಕವಾಗಿ ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ತಾವು ಆರೆಸ್ಸೆಸ್ ನಿಂದ ಬಂದಿರುವುದಾಗಿ ಹೇಳಿದ್ದಾರೆ ವಿನಃ ಕೋಲಿ ಸಮಾಜದಿಂದ ಬೆಳೆದು ಬಂದವರು ಎಂದು ಎಲ್ಲೂ ಹೇಳಿಕೊಂಡಿಲ್ಲ. ಮುಖ್ಯಮಂತ್ರಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಹಾಗೂ ಬಾರಿಕಿ ಸಮಾಜವನ್ನು ಎಸ್ಟಿ ಗೆ ಸೇರ್ಪಡಿಸಲು ಪ್ರಸ್ತಾವನೆ ಕಳುಹಿಸಲಾಗುವುದು. ಅದರ ದಾಖಲೆಗಳು ಸಿದ್ಧಪಡಿಸಿಕೊಳ್ಳಿ ಎಂದು ಎನ್.ರವಿಕುಮಾರ್, ಸಾಬಣ್ಣ ತಳವಾರ ಅವರಿಗೆ ಹೇಳಿದ್ದಾರೆ. ಇಷ್ಟಾದರೂ ಇಬ್ಬರೂ ಕಲಬುರಗಿಗೆ ಬಂದು ರಸ್ತೆ ತಡೆ ಮಾಡಿ ಏಕಪಕ್ಷೀಯವಾಗಿ ಪ್ರತಿಭಟನೆ ನಡೆಸಿರುವುದು ಖಂಡನೀಯ ಎಂದರು.
ಎಸ್ಟಿ ಸೇರ್ಪಡೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಗೆ ಸಮರ್ಪಕ ದಾಖಲೆಗಳೊಂದಿಗೆ ತಿಂಗಳೊಳಗಾಗಿ ಮಾಡುವುದಾಗಿ ಭರವಸೆ ಕೊಟ್ಟರೂ ಪ್ರತಿಭಟನೆ ನಡೆಸಲಾಗಿದೆ. ಹೋರಾಟ ನಡೆಸಲಿ ಪರವಾಗಿಲ್ಲ, ಆದರೆ ವ್ಯತಿರಿಕ್ತ ಹೇಳಿಕೆ ನೀಡಿ ಉಸ್ತುವಾರಿ ಸಚಿವರಿಗೆ ನಿಂದಿಸುವುದು, ಅವರನ್ನು ಮನೆಗೆ ಕಳುಹಿಸಲಾಗುವುದು ಎಂಬಂತೆ ಸೇರಿದಂತೆ ಇತರೆ ಭಾವನಾತ್ಮಕವಾಗಿ ಮಾತನಾಡಿ ವಿರೋಧ ಕಟ್ಟಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಜಗೋಪಾಲರೆಡ್ಡಿ, ಬಸವರಾಜ ಬೂದಿಹಾಳ, ಶಿವಾನಂದ ಹೊನಗುಂಟಿ, ರಮೇಶ್ ನಾಟಿಕಾರ್, ಗುಂಡು ಐನಾಪುರ, ಕಾಶಪ್ಪ ಡೊಳಗಾಂವ, ಶಿವು ಯಾಗಪುರ, ಸಾಬಣ್ಣ ದಂಡೋತಿ, ಶರಣು ಅರಣಕಲ, ಸೇರಿದಂತೆ ಹಲವರು ಇದ್ದರು.