ಕಲಬುರಗಿ| ಕೃಷಿ ಯಂತ್ರೋಪಕರಣಗಳ ಲೋಕಾರ್ಪಣೆ, ವಿಕಲಚೇತನರಿಗೆ ಯಂತ್ರಗಳ ವಿತರಣೆ
ಕಲಬುರಗಿ: ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಇತ್ತೀಚೆಗೆ ಉನ್ನತಿಕರಿಸಿದ ಕೃಷಿ ಯಂತ್ರೋಪಕರಣಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಈ ಮುಂಚೆ ಯಂತ್ರಗಳಿಂದ ರಾಶಿ ಮಾಡಲಾಗಿದ್ದರೂ ಸಮರ್ಪಕವಾಗಿ ಸಂಸ್ಕರಣೆಯಾಗುತ್ತಿರಲಿಲ್ಲ. ಹೀಗಾಗಿ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಆದರೆ ಉನ್ನತೀಕರಿಸಿದ ಯಂತ್ರಗಳಿಂದ ಸಂಪೂರ್ಣ ಕ್ಲಿನಿಂಗ್ , ಗ್ರೇಡಿಂಗ್ ಮತ್ತು ಪ್ಯಾಕಿಂಗ್ ಆಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಎಫ್.ಪಿ.ಓ ಕೇಂದ್ರದ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯಡಿಯಲ್ಲಿ ಕೃಷಿ ಉತ್ಪನ್ನಗಳನ್ನು ಪ್ರಾಥಮಿಕವಾಗಿ ಕ್ಲೀನಿಂಗ್, ಗ್ರೇಡಿಂಗ್ ಹಾಗೂ ಪ್ಯಾಕಿಂಗ್ ಮಾಡಲು ಈಗಾಗಲೆ ಜಿಲ್ಲೆಯಾದ್ಯಂತ 11 ಯಂತ್ರೋಪಕರಣ ಬಾಡಿಗೆ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರದ ಮೂಲಕ ಈ ಎಲ್ಲಾ ಯಂತ್ರಗಳನ್ನು ರೈತರು ಬಾಡಿಗೆ ಮೂಲಕ ಪಡೆಯಬಹುದಾಗಿದೆ. ಇದಕ್ಕಾಗಿ ಸರಕಾರ 5.50 ಕೋಟಿ ರೂ. ವ್ಯಯ ಮಾಡಿದೆ.
ಅಫಜಲಪುರ ತಾಲೂಕಿನ ಅಫಜಲಪುರ, ಅತನೂರ, ಕಲಬುರಗಿ ತಾಲೂಕಿನಲ್ಲಿ ಕಲಬುರಗಿ, ಸೇಡಂ ತಾಲೂಕಿನ ಸೇಡಂ ಪಟ್ಟಣ ಹಾಗೂ ಕೋಡ್ಲಾ, ಚಿತ್ತಾಪುರ ತಾಲೂಕಿನ ಚಿತ್ತಾಪುರ ಪಟ್ಟಣ, ಗುಂಡಗುರ್ತಿ, ಅಲ್ಲೂರ ಬಿ, ಡಿಗ್ಗಾಂವ, ಹೆಬ್ಬಾಳ ಹಾಗೂ ರಾವೂರ ಗ್ರಾಮದಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸ್ವಯಂ ಉದ್ಯೋಗದ ಮೂಲಕ ಆದಾಯ ಗಳಿಸಲು 2024-25ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆ ಅಡಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಅನುದಾನದಡಿಯಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಕಲಬುರಗಿ ತಾಲೂಕಿನ ಕೆರಿಭೋಸಗಾ ಗ್ರಾಮದ ವಿಠಲ್ ಭಿಮಶಾ ಪೂಜಾರಿ, ಭೀಮಳ್ಳಿ ಗ್ರಾಮದ ಸಂತೋಷ ಗಣಪತಿ ಎಂಬ ವಿಕಲಚೇತನರಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು.
ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಲಶ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಕಲಬುರಗಿ ಉತ್ತರ ಶಾಸಕರಾದ ಕನೀಜ್ ಫಾತಿಮಾ, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ್, ಕುಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್, ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.