ಕಲಬುರಗಿ| ನಿರುದ್ಯೋಗ, ಪರೀಕ್ಷಾ ಪ್ರಶ್ನೆಪತ್ರಿಕೆಗಳ ಸೋರಿಕೆ, ಭ್ರಷ್ಟಾಚಾರದ ವಿರುದ್ಧ ಸಹಿ ಸಂಗ್ರಹ ಅಭಿಯಾನ
ಕಲಬುರಗಿ: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪರೀಕ್ಷಾ ಪ್ರಶ್ನೆಪತ್ರಿಕೆಗಳ ಸೋರಿಕೆ, ಭ್ರಷ್ಟಾಚಾರ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್ (AIDYO) ವತಿಯಿಂದ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು.
ನಗರದ ರೈಲು ನಿಲ್ದಾಣದ ಎದುರುಗಡೆ ಹಾಗೂ ಸೂಪರ್ ಮಾರ್ಕೆಟ್ ಸಮೀಪ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಭಯಾನಕ ಸ್ವರೂಪ ಪಡೆದುಕೊಂಡಿದೆ. 78 ಕೇಂದ್ರ ಸರಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 9.78 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಾಗಿದೆ ಮತ್ತು ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಇದಲ್ಲದೆ, ಭ್ರಷ್ಟಾಚಾರ, ಪ್ರಶ್ನೆ ಪತ್ರಿಕೆ ಸೋರಿಕೆ, ಸರಕಾರಿ ಇಲಾಖೆಗಳ ಖಾಸಗೀಕರಣವು ಪರಿಸ್ಥಿತಿಯನ್ನು ಹದಗೆಡಿಸಿವೆ. 2014ರಲ್ಲಿ ಪ್ರತಿ ವರ್ಷ ಯುವಕರಿಗೆ 20 ಮಿಲಿಯನ್ ಉದ್ಯೋಗಗಳನ್ನು ಒದಗಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಭರವಸೆ ಈಡೇರಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಗರಿಷ್ಟ ವಯಸ್ಸಿನ ಮಿತಿಯನ್ನು 5 ವರ್ಷ ಹೆಚ್ಚಿಸಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಶುಲ್ಕ ವಿಧಿಸಬಾರದು ಮತ್ತು ಅಭ್ಯರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯಗಳನ್ನು ಒದಗಿಸಬೇಕು. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಎಲ್ಲಾ ಹುದ್ದೆಗಳನ್ನು ಖಾಯಂ ಮಾಡಬೇಕು, ದೇಶದಾದ್ಯಂತ ಗಿಗ್ ಕಾರ್ಮಿಕರಿಗೆ ಉದ್ಯೋಗ, ಸ್ಥಾನಮಾನ, ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್, ಹೆಚ್., ಜಿಲ್ಲಾ ಕಾರ್ಯದರ್ಶಿ ಈಶ್ವರ , ರಮೇಶ ದೇವಕರ್, ಪ್ರಶಾಂತ ಹಾದಿಮನಿ, ತೇಜಶ್ವಿನಿ ಆರ್. ಇಬ್ರಾಹಿಂಪುರ್, ಸಚಿನ್ ಪವಾರ್, ಪ್ರಭಾಕರ ಚಿಂಚೋಳ್ಳಿ, ಗಣೇಶ ಜಾಧವ್, ಸಚಿನ್ ಪವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.