ಕಲಬುರಗಿ| ರಾಜ್ಯ ಸರಕಾರದ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ
ಕಲಬುರಗಿ: ಕಾಂಗ್ರೆಸ್ ಸರಕಾರ ಅಭಿವೃದ್ಧಿಯತ್ತ ಗಮನ ಸಹರಿಸದೇ ಜನರ ಸಂಕಷ್ಟಗಳಿಗೆ ಸ್ಪಂದಿಸದೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಓಬಿಸಿ ಮೋರ್ಚಾ ನಗರಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಅವರ ನೇತೃತ್ವದಲ್ಲಿ ಕುದರೆ ಹಾಗೂ ಕತ್ತೆಗಳೊಂದಿಗೆ ವಿನೂತನ ಪ್ರತಿಭಟನೆ ನಡೆಸಲಾಯಿತು.
ಎಸ್‌ವಿಪಿ ವೃತ್ತದಿಂದ ಶುರುವಾರ ಕುದುರೆ ಹಾಗೂ ಕತ್ತೆಗಳೊಂದಿಗೆ ನಡೆದ ಪ್ರತಿಭಟನೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮುಕ್ತಾಯವಾಯಿತು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಗೃಹ ಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರಿಗೆ ರೂ. 2,000 ನೀಡಲಾಗುತ್ತಿದೆ. ಆದರೆ ಅದರಿಂದ ಮಹಿಳೆಯರಿಗೆ ಏನು ಲಾಭ? ಅದರ ಬದಲಾಗಿ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಠಿ ಮಾಡುವಂತ ಯೋಜನೆಗಳನ್ನು ರೂಪಸಬೇಕಾಗಿತ್ತು. ಅಲ್ಲದೇ ಅನ್ನಭಾಗ ಯೋಜನೆಯಲ್ಲಿಯೂ ಪಡಿತರ ಅಕ್ಕಿ ಬದಲು ತಲಾ 38 ರೂ ಹಣವನ್ನು ಖಾತೆಗೆ ಹಾಕಲಾಗುತ್ತಿದೆ. ಹಣದ ಬದಲು ಅಕ್ಕಿ ಖರೀದಿಸಲು ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ಗೃಹಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ಎಂದು ಮಾತ್ರ ಹೇಳಲಾಗುತ್ತಿದೆ. ಅದರ ಹೊರೆಯನ್ನು ಸಾಮಾನ್ಯ ಗ್ರಾಹಕರ ಮೇಲೆ ಬೆಲೆ ಏರಿಕೆಯಿಂದ ಹಾಕುವುದು ಎಷ್ಟು ಸರಿ? ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಹೆಸರಿನಲ್ಲಿ ಸರಕಾರ ಅಭಿವೃದ್ಧಿಯನ್ನು ಮರೆತಿದೆ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯ ನಿಂತು ಹೋಗಿವೆ. ಕಲಬುರಗಿ ನಗರದಲ್ಲಿನ ಎಲ್ಲಾ ಮುಖ್ಯ ರಸ್ತೆಗಳ ಟಾರ್ ಕಿತ್ತು ಹೋಗುತ್ತಿದೆ. ಅದಕ್ಕೆ ದುರಸ್ಥಿ ಮಾಡಲು ಇಲಾಖೆಗಳಲ್ಲಿ ಹಣದ ಕೊರತೆ ಇದೆ ಎಂದು ಅಧಿಕಾರಿಗಳು ಹೇಳಿತ್ತಿದ್ದಾರೆ. ಇನ್ನೂ ಗ್ರಾಮೀಣ ಭಾಗದ ರಸ್ತೆಗಳ ಗತಿಯೇನು? ಎಂದು ದೇವೇಂದ್ರ ದೇಸಾಯಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಅಭಿಷೇಕ್, ಶಶಿ ಮದ್ದೂರು, ರಾಮೋಜಿ ಜ್ಯೋತಿಬಾ, ಸಂಗಮೇಶ, ಲೋಕೇಶ್, ರಾಕೇಶ್ ಮಾಡ್ಯಾಳ, ಶಿವಾನಂದ ಕಲ್ಲೂರ್, ಕಮಲಾಕರ್ ಅಣಕಲ್, ಸಿದ್ದು ಬುಸನೂರ್, ನಾಗು ಹತಗುಂದಿ, ಶಿವರಾಜ್, ಮಲ್ಲು ಪೊದ್ದಾರ್ ಸೇರಿದಂತೆ ಹಲವರು ಇದ್ದರು.