×
Ad

ಕಲಬುರಗಿ| ವೆನೆಜುವೆಲಾ ಮೇಲೆ ಅಮೆರಿಕ ದಾಳಿ ಖಂಡಿಸಿ ಪ್ರತಿಭಟನೆ

Update: 2026-01-10 23:15 IST

ಕಲಬುರಗಿ: ಸಿಪಿಐ, ಸಿಪಿಐಎಂ ಹಾಗೂ ಎಸ್.ಯು.ಸಿ.ಐ ಎಡ ಪಕ್ಷಗಳ ನೇತೃತ್ವದಲ್ಲಿ ವೆನೆಜುವೆಲಾ ದೇಶದ ಮೇಲೆ ಅಮೆರಿಕ ದಾಳಿ ಖಂಡಿಸಿ, ಇಲ್ಲಿಯ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ವೃತ್ತದಲ್ಲಿ ಅಮೆರಿಕಾ ಸಾಮ್ರಾಜ್ಯಶಾಹಿಯ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ವೆನೆಜುವೆಲಾ ವಿರುದ್ಧ ಯು.ಎಸ್. ಆಕ್ರಮಣ ಹಾಗೂ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ, ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಅಪಹರಣವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ವಿಶ್ವಸಂಸ್ಥೆಯ ಚಾರ್ಟರನ್ನು ಮತ್ತು ಹಲವು ಅಂತರರಾಷ್ಟೀಯ ಕಾನೂನು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.

ಮಾದಕದ್ರವ್ಯ-ಭಯೋತ್ಪಾದಕ ಗ್ಯಾಂಗ್‌ಗಳ ವಿರುದ್ಧ ಯುದ್ಧದ ನೆಪದಲ್ಲಿ ವೆನೆಜುವೆಲಾದ ಸುತ್ತಲೂ ಕಳೆದ ಹಲವು ದಶಕಗಳಲ್ಲಿ ಕಂಡಿರದ ಭಾರೀ ನೌಕಾ-ವಾಯುಸೇನಾ ಜಮಾವಣೆಯಾಗಿತ್ತು. ಯಾವುದೇ ಪುರಾವೆ ಇಲ್ಲದೆ ನರ್ಕೊ-ಟೆರರಿಸ್ಟ್‌ ಗ್ಯಾಂಗ್‌ಗಳದ್ದು ಎಂದು ಆಪಾದಿಸಿ 35 ನಾಗರಿಕ ದೋಣಿಗಳ ಮೇಲೆ ಬಾಂಬ್ ದಾಳಿ ನಡೆಸಿ 115 ಅಮಾಯಕ ಜನರ ಕಗ್ಗೊಲೆ ಮಾಡಲಾಗಿದೆ. “ದಿಗ್ಬಂಧಿತ ತೈಲ” ಸಾಗಾಣಿಕೆಯೆಂದು ಆಪಾದಿಸಿ ಎರಡು ತೈಲ ಹಡಗಗಳನ್ನು ಕಡಲುಗಳ್ಳತನದಂತಹ ಕಾರ್ಯಾಚರಣೆಯಲ್ಲಿ ತಡೆದು ನಿಲ್ಲಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, "ನಾವು ಹಾಕಿದ್ದಷ್ಟು ಸುಂಕ ತೆಗೆದುಕೊಳ್ಳಬೇಕು, ತಾನು ಹೇಳಿದ ಕಡೆ ವ್ಯಾಪಾರ ಮಾಡಬೇಕು, ರಷ್ಯಾ ಕಡೆಯಿಂದ ತೈಲ ಆಮದು ಮಾಡಿಕೊಳ್ಳಬಾರದು, ಇಲ್ಲದಿದ್ದರೆ ದೊಡ್ಡ ನಷ್ಟ ಅನುಭವಿಸುತ್ತೀರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇರೆ ದೇಶಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಇಂತಹ ಸಾಮ್ರಾಜ್ಯಶಾಹಿಗಳ ಧೋರಣೆಯನ್ನು ಎಡಪಕ್ಷಗಳು ಇಡೀ ದೇಶದಾದ್ಯಂತ ಖಂಡಿಸುತ್ತೇವೆ ಎಂದು ಹೇಳಿದರು.

ಸಿಪಿಐ ಮುಖಂಡ ಭೀಮಾಶಂಕರ ಮಾಡ್ಯಾಳ ಮಾತನಾಡಿ, ಸಾಮ್ರಾಜ್ಯಶಾಹಿ ಅಮೆರಿಕ ಸಣ್ಣಪುಟ್ಟ ದೇಶಗಳ ಮೇಲೆ ಬೆದರಿಯೊಡ್ಡಿ ದಾಳಿ ನಡೆಸುತ್ತಿದೆ, ಇಂತಹ ದಾಳಿಗಳು ಮುಂದುವರೆಸಿದರೆ ಅಮೆರಿಕ ಹೊತ್ತಿ ಉರಿಯುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಇದೇ ವೇಳೆಯಲ್ಲಿ SUCI (C) ನ ಜಿಲ್ಲಾ ಸಮಿತಿಯ ಸದಸ್ಯರಾದ ಎಸ್. ಎಂ. ಶರ್ಮಾ, ಮೌಲಾ ಮುಲ್ಲಾ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ವಿ.ಜಿ. ದೇಸಾಯಿ, ಮಹೇಶ್ ಎಸ್.ಬಿ., ಮಹೇಶ್ ನಾಡಗೌಡ, ಸೀಮಾ ದೇಶಪಾಂಡೆ, ಜಗನ್ನಾಥ್ ಎಸ್. ಎಚ್., ಹಣಮಂತ ಎಸ್. ಎಚ್., ಸಂತೋಷ್ ಕುಮಾರ್ ಹಿರವೆ, ಮೀನಾಕ್ಷಿ ಬಾಳಿ, ಪರಶುರಾಮ್, ಸುಧಾಮ್ ಧನ್ನಿ, ಪದ್ಮಿನಿ ಕಿರಣಗಿ, ಗೌರಮ್ಮ ಪಾಟೀಲ್, ಶಾಂತಾ ಘಂಟಿ, ಶ್ರೀಮಂತ ಬಿರಾದರ್, ಲವಿತ್ರಾ ವಸ್ತ್ರದ್, ಸಾಜೀದ್ ಅಹ್ಮದ್, ಭೀಮಶೆಟ್ಟಿ ಯಂಪಳ್ಳಿ, ವಿರೂಪಾಕ್ಷಿ ತಡಕಲ್, ಸರ್ವೇಶ್, ಸಿದ್ದಪ್ಪ ಫಾಲ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News