ಜ.12ರಂದು ಕಲಬುರಗಿಯಲ್ಲಿ 1,595 ಕೋಟಿ ರೂ.ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಚಾಲನೆ : ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 12ರಂದು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ "ಪ್ರಜಾ ಸೌಧ" ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಕಲಬುರಗಿ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದು, ಯಡ್ರಾಮಿ ಮತ್ತು ಸೇಡಂನಲ್ಲಿ ಪ್ರತ್ಯೇಕ ಕಾರ್ಯಕ್ರಮದಲ್ಲಿ 1,595 ಕೋಟಿ ರೂ. ವೆಚ್ಚದ ಜಿಲ್ಲೆಯ 467 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಜನವರಿ 12ರಂದು ಮುಖ್ಯಮಂತ್ರಿಗಳು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಯಡ್ರಾಮಿಗೆ ಆಗಮಿಸಲಿದ್ದಾರೆ. ಅಲ್ಲಿ ಕೆ.ಕೆ.ಅರ್.ಡಿ.ಬಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆಯ ಜಂಟಿ ಆಶ್ರಯದಲ್ಲಿ ನಡೆಯುವ ಪ್ರಜಾ ಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಗೂ 300 ಕೆ.ಪಿ.ಎಸ್. ಶಾಲೆ ಮಂಜೂರಾತಿಯ ಘೋಷಣೆ ಮಾಡುವುದರ ಜೊತೆಗೆ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿಗೆ ಸಂಬಂಧಿಸಿದಂತೆ 867.49 ಕೋಟಿ ರೂ. ವೆಚ್ಚದ ನಿರ್ಮಾಣ ಕಾರ್ಯಕ್ಕೆ 82 ಅಡಿಗಲ್ಲು ಮತ್ತು 38.37 ಕೋಟಿ ರೂ. ವೆಚ್ಚದ 17 ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.
ಸೇಡಂ ಪಟ್ಟಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 579.68 ಕೋಟಿ ರೂ. ವೆಚ್ಚದ 292 ಯೋಜನೆಗಳಿಗೆ ಅಡಿಗಲ್ಲು ಹಾಗೂ 110.35 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಕೈಗೆತ್ತಿಕೊಂಡು ಪೂರ್ಣಗೊಂಡ 76 ಅಭಿವೃದ್ದಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದರಲ್ಲಿ ಪ್ರಮುಖವಾಗಿ 85.50 ಕೋಟಿ ರೂ. ವೆಚ್ಚದ ಕಾಚೂರ, 90 ಕೋಟಿ ರೂ. ವೆಚ್ಚದ ಬೀರನಳ್ಳಿ, 67.3 ಕೋಟಿ ರೂ. ವೆಚ್ಚದ ಯಡ್ಡಳ್ಳಿ, 82.90 ಕೋಟಿ ರೂ. ವೆಚ್ಚದಲ್ಲಿ ತರನಹಳ್ಳಿ ಏತ ನೀರಾವರಿ ಯೋಜನೆ ಸೇರಿವೆ. ಇದಲ್ಲದೆ ಸೇಡಂ, ಚಿಂಚೋಳಿ ತಾಲೂಕಿನ ಅನೇಕ ಕಡೆ ರಸ್ತೆ ನಿರ್ಮಾಣ, ಸುಧಾರಣೆ ಕಾಮಗಾರಿಗೂ ಇಲ್ಲಿ ಅಡಿಗಲ್ಲು ಹಾಕಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಹಾನಿಯಾದ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೇಯ ವರದಿಯಂತೆ ಒಟ್ಟು 3.24 ಲಕ್ಷ ಹೇಕ್ಟರ್ ಪ್ರದೇಶ ಹಾನಿಯಾಗಿದೆ. ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಈಗಾಗಲೆ ಜಿಲ್ಲೆಯ 3,23,318 ರೈತರಿಗೆ 250.97 ಕೋಟಿ ರೂ. ಪಾವತಿ ಮಾಡಲಾಗಿದೆ. ಇದರ ಜೊತೆಗೆ ರಾಜ್ಯ ಸರಕಾರದಿಂದ ಘೋಷಿಸಿದ ಇನ್ಪುಟ್ ಸಬ್ಸಿಡಿ ಪ್ರತಿ ಹೆಕ್ಟೇರ್ ಗೆ 8,500ರೂ. ಗಳಂತೆ 247.75 ಕೋಟಿ ರೂ. ಸಹ ಪರಿಹಾರ ನೀಡಿದ್ದು, ಒಟ್ಟಾರೆ ಜಿಲ್ಲೆಗೆ 498.73 ಕೋಟಿ ರೂ. ಅತಿವೃಷ್ಠಿ ಪರಿಹಾರ ರೈತರಿಗೆ ವಿತರಿಸಿದೆ ಎಂದು ಸಚಿವರು ತಿಳಿಸಿದರು.
ಇದರಲ್ಲಿ 12,313 ರೈತರಿಗೆ ಬೇರೆ ಬೇರೆ ಕಾರಣಗಳಿಂದಾಗಿ ಪರಿಹಾರ ಪಾವತಿಗೆ ಬಾಕಿ ಇದ್ದು, 10,548 ಜನ ಅರ್ಹರಿದ್ದು, ತಾಂತ್ರಿಕ ಸಮಸ್ಯೆ ಬಗೆಹರಿಸಿ ಇವರಿಗೆ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು. ಇನ್ನು 1,771 ರೈತರ ಪರಿಹಾರ ಹಣ ಪಾವತಿಸಲು ಕೆವೈಸಿ ಪೆಂಡಿಂಗ್, ನಿಷ್ಟ್ರೀಯ ಖಾತೆ, ಖಾತೆ ರದ್ದು, ನಿಖರವಲ್ಲದ ಖಾತೆ, ನಿಷ್ಕ್ರಿಯ ಆಧಾರ್ ಜೋಡಣೆಯಿಂದ ಹೀಗೆ ಅನೇಕ ತಾಂತ್ರಿಕ ಕಾರಣಗಳಿಂದ ವೈಫಲ್ಯವಾದ ರೈತರು ಕೊಡಲೇ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಈ ಮೂಲಕ ತಿಳಿಸಲಾಗಿದೆ ಎಂದು ಹೇಳಿದರು.
ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿ ಬಿದ್ದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ರಸ್ತೆಗಳು ಹಾನಿಯಾಗಿದ್ದು, ಜಿಲ್ಲೆಯ ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ ಜೇವರ್ಗಿ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮಾಂತರ ಹೀಗೆ ಒಟ್ಟಾರೆ 90 ರಸ್ತೆ ಕಾಮಗಾರಿಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 88.08 ಕೋಟಿ ರೂ. ಮಂಜೂರು ಮಾಡಿದ್ದು, ಇದರಲ್ಲಿ ಹೊಸದಾಗಿ ರಸ್ತೆ ನಿರ್ಮಾಣ, ಸುಧಾರಣೆ ಮಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
163 ಕೋಟಿ ರೂ. ವೆಚ್ಚದಲ್ಲಿ 17 ಪ್ರಜಾ ಸೌಧ ನಿರ್ಮಾಣ: ಅಜಯ್ ಸಿಂಗ್
ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ, ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಈ ವೇಳೆ ಮಾತನಾಡಿ, ಜ.12ರ ಯಡ್ರಾಮಿ ಕಾರ್ಯಕ್ರಮಕ್ಕೆ ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಸಿಎಂ.ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಸೇರಿದಂತೆ ಪ್ರದೇಶದ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಇಲ್ಲಿ ಪ್ರಸಕ್ತ 2025-26ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಪ್ರದೇಶಕ್ಕೆ ಘೋಷಿಸಿದ 100 ಕೆ.ಪಿ.ಎಸ್. ಶಾಲೆ ಜೊತೆಗೆ ಮಂಡಳಿಯಿಂದ ಹೆಚ್ಚುವರಿಯಾಗಿ 200 ಶಾಲೆ ನಿರ್ಮಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೀಡಲಾಗುತ್ತದೆ. ಇದರಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 8-10 ಕೆ.ಪಿ.ಎಸ್. ಶಾಲೆ ಬರಲಿವೆ. ಕಂದಾಯ ಇಲಾಖೆ ಮತ್ತು ಮಂಡಳಿ ಅನುದಾನ ಸೇರಿ ಒಟ್ಟು 163 ಕೋಟಿ ರೂ. ವೆಚ್ಚದಲ್ಲಿ 17 ಪ್ರಜಾ ಸೌಧ ನಿರ್ಮಾಣಕ್ಕೆ ಸಿ.ಎಂ. ಅವರು ಅಡಿಗಲ್ಲು ನೆರವೇರಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಶಾಸಕ ಅಲ್ಲಮಪ್ರಭು ಪಾಟೀಲ್, ಎಂ.ಎಲ್.ಸಿ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಝಹರ್ ಖಾನ್ ಆಲಂ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ್ ಹರವಾಳ ಮತ್ತಿತ್ತರರು ಇದ್ದರು.