Kalaburagi | ಪೌರಕಾರ್ಮಿಕರು ಸುರಕ್ಷತಾ ಪರಿಕರ ಧರಿಸುವುದು ಕಡ್ಡಾಯ: ಡಿಸಿ ಇಕ್ರಮ್ ಶರೀಫ್

Update: 2026-07-18 18:45 IST

ಕಲಬುರಗಿ: ಪೌರಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಕೆಲಸದ ಅವಧಿಯಲ್ಲಿ ಗ್ಲೌಸ್ ಸೇರಿದಂತೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಸಮಾಜ ಕಲ್ಯಾಣ ಇಲಾಖೆಯ 2ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲವು ಪೌರಕಾರ್ಮಿಕರು ಗ್ಲೌಸ್ ಧರಿಸುವುದರಿಂದ ಕೈ ಬೆವರುತ್ತದೆ ಎಂಬ ಕಾರಣ ನೀಡಿ ನೇರವಾಗಿ ಕೈಯಿಂದಲೇ ಕಸ ವಿಲೇವಾರಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸುರಕ್ಷತಾ ಪರಿಕರಗಳ ಬಳಕೆ ಕರ್ತವ್ಯದ ಅವಿಭಾಜ್ಯ ಅಂಗವಾಗಿದ್ದು, ಯಾವುದೇ ಕಾರಣಕ್ಕೂ ಇದರಲ್ಲಿ ವಿನಾಯಿತಿ ನೀಡಬಾರದು ಎಂದು ಹೇಳಿದರು.

ಸುರಕ್ಷತಾ ಪರಿಕರಗಳನ್ನು ಧರಿಸದೆ ಕೆಲಸ ಮಾಡುವ ಪೌರಕಾರ್ಮಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಾರ್ಡ್ ಮಟ್ಟದಲ್ಲಿ ತಕ್ಷಣ ಸಭೆ ನಡೆಸಿ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪೌರಕಾರ್ಮಿಕರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಹಾಗೂ ವರ್ಷಕ್ಕೊಮ್ಮೆ ಮಾಸ್ಟರ್ ಹೆಲ್ತ್ ಚೆಕ್‌ಅಪ್ ನಡೆಸಲು ಕ್ರಮ ಕೈಗೊಳ್ಳಬೇಕು ಎಂದರು.

ಮ್ಯಾನುಯಲ್ ಸ್ಕ್ಯಾವೆಂಜಿಂಗ್ ನಿರ್ಮೂಲನೆಗೆ ಒತ್ತು :

ಸಭೆಯಲ್ಲಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ನಿರ್ಮೂಲನೆ ಹಾಗೂ ಕಾರ್ಮಿಕರ ಸುರಕ್ಷತೆ ಕುರಿತು ಚರ್ಚೆ ನಡೆಯಿತು. ಮಾನವ ಚಾಲಿತ ಮಲ ಸಂಸ್ಕರಣೆ ಪದ್ಧತಿಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಯುಜಿಡಿ ಸೌಲಭ್ಯ ಇಲ್ಲದ ಪಟ್ಟಣ ಪಂಚಾಯಿತಿಗಳಿಗೂ ಸಣ್ಣ ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರಗಳನ್ನು ಒದಗಿಸುವ ಕುರಿತು ಚರ್ಚಿಸಲಾಯಿತು.

ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ಯೋಜನೆಗಳ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, 2022-23ನೇ ಸಾಲಿನ ಯೋಜನೆಗಳು ನಾಲ್ಕು ವರ್ಷಗಳಿಂದ ಬಾಕಿ ಉಳಿದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

“ರಾಜ್ಯದ 29 ಜಿಲ್ಲೆಗಳಲ್ಲಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿರುವಾಗ ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ವಿಳಂಬವಾಗುತ್ತಿರುವುದು ಏಕೆ? ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಅಧಿಕಾರಿಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಖಾಲಿ ಹುದ್ದೆಗಳ ಭರ್ತಿಗೆ ಸೂಚನೆ :

ಸರ್ಕಾರದ ಆದೇಶದಂತೆ ಪೌರಕಾರ್ಮಿಕರು, ತೋಟಗಾರರು, ಲೋಡರ್ಸ್, ಕ್ಲೀನರ್ಸ್ ಹಾಗೂ ವಾಟರ್ ಸಪ್ಲೈ ಹೆಲ್ಪರ್ಸ್ ಸೇರಿದಂತೆ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಶೀಘ್ರ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಮಂಜೂರಾಗಿರುವ 215 ಮನೆಗಳ ಪೈಕಿ 121 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ ಮನೆಗಳ ನಿರ್ಮಾಣಕ್ಕೆ ಜಾಗದ ಕೊರತೆ ಇರುವ ಹಿನ್ನೆಲೆಯಲ್ಲಿ ಸೂಕ್ತ ಸರ್ಕಾರಿ ಜಾಗ ಗುರುತಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಎಸ್‌ಸಿಪಿ/ಟಿಎಸ್‌ಪಿ ಯೋಜನೆಗಳ ಪ್ರಗತಿಯನ್ನೂ ಪರಿಶೀಲಿಸಿದ ಅವರು, ಮುಂದಿನ ತ್ರೈಮಾಸಿಕ ಸಭೆಯಲ್ಲಿ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ ಯೋಜನೆಗಳ ಖರ್ಚು-ವೆಚ್ಚಗಳ ಸಂಪೂರ್ಣ ಮಾಹಿತಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಲೂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಎಸ್. ಸಂಕನೂರ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಡಿಯುಡಿಸಿ ಜಿಲ್ಲಾ ಯೋಜನಾ ನಿರ್ದೇಶಕ ಮುನ್ನವರ ದೌಲಾ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ರಾಜ್ಯ ಸಮಿತಿ ಸದಸ್ಯೆ ನರ್ಮದಾ ಸೌದಾ ಹಾಗೂ ಮ್ಯಾನುಯಲ್ ಸ್ಕ್ಯಾವೆಂಜರ್ ಜಿಲ್ಲಾ ಜಾಗೃತಿ ಸಮಿತಿ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News