Kalaburagi | ವರದಕ್ಷಿಣೆ ಕಿರುಕುಳ ಪ್ರಕರಣ: ಪತಿಗೆ 7 ವರ್ಷ ಜೈಲು ಶಿಕ್ಷೆ

Update: 2026-07-18 18:34 IST

ಸಾಂದರ್ಭಿಕ ಚಿತ್ರ (AI)

ಕಲಬುರಗಿ: ವರದಕ್ಷಿಣೆ ಕಿರುಕುಳ ಹಾಗೂ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪತಿಯನ್ನು ದೋಷಿ ಎಂದು ಪರಿಗಣಿಸಿದ ನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಏಳು ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ವಿವರದಂತೆ, ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮಿಸಬಾನಗರ ನಿವಾಸಿ ಸೈಯದ ಆಸೀಫ್ ಮತ್ತು ಹಾಜರಾ ಇರಂ ಅವರ ವಿವಾಹವು 2016ರ ಡಿಸೆಂಬರ್ 15ರಂದು ನಡೆದಿತ್ತು. ಮದುವೆ ವೇಳೆ ವಧು ಕಡೆಯವರು ₹1 ಲಕ್ಷ ನಗದು, 11 ತೊಲೆ ಚಿನ್ನ, ಹೀರೋ ಹೋಂಡಾ ಫ್ಯಾಷನ್ ಮೋಟಾರ್‌ಸೈಕಲ್ ಹಾಗೂ ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಿದ್ದರು.

ವಿವಾಹದ ಬಳಿಕ ಪತಿ ಸೈಯದ ಆಸೀಫ್, ಅತ್ತೆ ಖಾಜಾಬಿ ಬೇಗಂ, ಮೈದುನ ಸೈಯದ ಖಲೂಂ ಹಾಗೂ ನಾದಿನಿ ಖನಿಜಾ ಬೇಗಂ ಅವರು ಹೆಚ್ಚಿನ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿತ್ತು. ಫಿರ್ಯಾದಿದಾರರ ಬಟ್ಟೆ ಅಂಗಡಿಯನ್ನು ಖಾಲಿ ಮಾಡಿ ಆರೋಪಿ ಹೆಸರಿನಲ್ಲಿ ಮೆಡಿಕಲ್ ಅಂಗಡಿ ನಡೆಸಲು ನೀಡಬೇಕು ಹಾಗೂ ಕುಟುಂಬದ ಹೆಸರಿನಲ್ಲಿದ್ದ ಜಮೀನು ಮತ್ತು ಪ್ಲಾಟ್‌ಗಳನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.

ಈ ಕಿರುಕುಳವನ್ನು ತಾಳಲಾರದೆ, ಒಂದು ವರ್ಷದ ಮಗುವಿನ ತಾಯಿಯಾಗಿದ್ದ ಹಾಜರಾ ಇರಂ ಅವರು 2018ರ ಅಕ್ಟೋಬರ್ 9ರಂದು ಆರೋಪಿಗಳ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 498ಎ, 304ಬಿ ಹಾಗೂ 34 ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 4ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಆಗಿನ ಗ್ರಾಮೀಣ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್.ಎಸ್. ಹುಲೂರು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎ.ವಿ. ಶ್ರೀನಾಥ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಸೈಯದ ಆಸೀಫ್ ಅವರನ್ನು ದೋಷಿ ಎಂದು ಘೋಷಿಸಿದರು.

ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಕಲಂ 304ಬಿ ಅಡಿಯಲ್ಲಿ ಏಳು ವರ್ಷಗಳ ಸಾದಾ ಜೈಲು ಶಿಕ್ಷೆ, ಕಲಂ 498ಎ ಅಡಿಯಲ್ಲಿ ಎರಡು ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 4ರ ಅಡಿಯಲ್ಲಿ ಒಂದು ವರ್ಷದ ಸಾದಾ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರಲಿವೆ ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದಲ್ಲಿ ಆರೋಪಿಗಳಾಗಿದ್ದ ಖಾಜಾಬಿ ಬೇಗಂ, ಸೈಯದ್‌ ಖಲೂಂ ಮತ್ತು ಖನಿಜಾ ಬೇಗಂ ವಿರುದ್ಧ ಆರೋಪಗಳು ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಮೃತಳ ತಾಯಿ ಶಹಾನಾಜ್ ಬೇಗಂ ಅವರಿಗೆ ಸೂಕ್ತ ಪರಿಹಾರ ಒದಗಿಸುವ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಆರ್. ನರಸಿಂಹಲು ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News