Kalaburagi | ಮಾಜಿ ಸಿಎಂ ಎನ್.ಧರ್ಮಸಿಂಗ್ ಅವರ 9ನೇ ವರ್ಷದ ಪುಣ್ಯಸ್ಮರಣೆ: ನೆಲೋಗಿ ಸ್ಮಾರಕಕ್ಕೆ ಶ್ರದ್ಧಾಂಜಲಿ ಸಲ್ಲಿಕೆ

Update: 2026-07-27 19:15 IST

ಕಲಬುರಗಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಧರ್ಮಸಿಂಗ್ ಅವರ 9ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ, ಅವರ ಸ್ವಗ್ರಾಮ ಹಾಗೂ ಜನ್ಮಭೂಮಿಯಾದ ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿರುವ ಸ್ಮಾರಕದಲ್ಲಿ ಸೋಮವಾರ ಕುಟುಂಬಸ್ಥರು, ಜನಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಧರ್ಮಸಿಂಗ್ ಅವರ ಪುತ್ರ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಧರ್ಮಸಿಂಗ್ ಅವರು ಸ್ಮಾರಕದಲ್ಲಿರುವ ಪ್ರತಿಮೆಗೆ ಭಕ್ತಿಜ್ಯೋತಿ ಬೆಳಗಿ, ಪುಷ್ಪಮಾಲೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಎನ್. ಧರ್ಮಸಿಂಗ್ ಅವರು ಮೌಲ್ಯಾಧಾರಿತ ರಾಜಕಾರಣದ ಮೂಲಕ ಜೀವನಪೂರ್ತಿ ಜನಪರ ಸೇವೆ ಸಲ್ಲಿಸಿದ್ದು, ಅವರ ಪ್ರಾಮಾಣಿಕತೆ, ಸರಳತೆ ಹಾಗೂ ನಿಸ್ವಾರ್ಥ ಸೇವೆಯ ಮಾರ್ಗವು ಇಂದಿನ ಹಾಗೂ ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ ಎಂದು ಹೇಳಿದರು.

ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಧರ್ಮಸಿಂಗ್ ಅವರೊಂದಿಗಿನ ಒಡನಾಟ ಹಾಗೂ ಅವರು ಸಮಾಜಕ್ಕಾಗಿ ಕೈಗೊಂಡ ಜನಪರ ಕಾರ್ಯಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಧರ್ಮಸಿಂಗ್ ಅವರ ಕುಟುಂಬದ ಸದಸ್ಯರು, ಹಿರಿಯರು, ಆಪ್ತರು, ಹಿತೈಷಿಗಳು, ನೆಲೋಗಿ ಗ್ರಾಮದ ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗವಹಿಸಿ ಗೌರವ ನಮನ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News