371(ಜೆ) ಸಮರ್ಪಕ ಅನುಷ್ಠಾನಕ್ಕೆ ಜು. 29ರಂದು ವಿಶೇಷ ಸಭೆ: ಶರಣಬಸಪ್ಪ ಪಪ್ಪಾ

Update: 2026-07-27 14:03 IST

ಕಲಬುರಗಿ: ಸಂವಿಧಾನದ 371(ಜೆ) ವಿಧಿಯ ಸಮರ್ಪಕ ಅನುಷ್ಠಾನ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಬಲವರ್ಧನೆಗಾಗಿ ಜು. 29ರಂದು ಬೆಳಗ್ಗೆ 11 ಗಂಟೆಗೆ ನಗರದ ಕೆಕೆಸಿಸಿಐ ಕಚೇರಿಯಲ್ಲಿ ವಿಶೇಷ ಚಿಂತನಾ ಸಭೆಯನ್ನು ಆಯೋಜಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಪಪ್ಪಾ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 371(ಜೆ) ಹೋರಾಟದ ಪ್ರಮುಖ ರೂವಾರಿ ಹಾಗೂ ಪ್ರೇರಣಾ ಶಕ್ತಿಯಾಗಿದ್ದ ದಿ. ವೈಜನಾಥ ಪಾಟೀಲ ಅವರ ಜನ್ಮದಿನದ ಅಂಗವಾಗಿ ಈ ಸಭೆ ನಡೆಯಲಿದ್ದು, ಅವರ ಆದರ್ಶಗಳನ್ನು ಸ್ಮರಿಸುವುದರ ಜೊತೆಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ಕಾರ್ಯತಂತ್ರ ರೂಪಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.

371(ಜೆ) ವಿಧಿಯ ಪರಿಣಾಮಕಾರಿ ಅನುಷ್ಠಾನ, ಅದರ ಮೂಲ ಉದ್ದೇಶಗಳ ಸಂಪೂರ್ಣ ಸಾಕಾರ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಘಟನಾ ಬಲವರ್ಧನೆ ಹಾಗೂ ಮುಂದಿನ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅನುಸರಿಸಬೇಕಾದ ಹೋರಾಟದ ರೂಪುರೇಷೆಗಳ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಲಿದೆ. ಅಲ್ಲದೆ, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳ ಸಲಹೆ, ಅಭಿಪ್ರಾಯ ಹಾಗೂ ಕಾರ್ಯಯೋಜನೆಗಳನ್ನು ಸಂಗ್ರಹಿಸಿ ಮುಂದಿನ ಹೋರಾಟದ ದಿಕ್ಕನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಹೋರಾಟಗಾರರು, ಬುದ್ಧಿಜೀವಿಗಳು, ಯುವಕರು ಹಾಗೂ ಕಲ್ಯಾಣ ಕರ್ನಾಟಕದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡುವಂತೆ ಅವರು ಮನವಿ ಮಾಡಿದರು.

ಸಕಾಲಕ್ಕೆ ಖಾಲಿ ಹುದ್ದೆಗಳ ಭರ್ತಿ ಮಾಡದಿರುವುದು, ಟ್ರಿಬ್ಯುನಲ್ ಸ್ಥಾಪನೆಯಾಗದಿರುವುದು, ವಯೋಮಿತಿಯಲ್ಲಿ ಸಡಿಲಿಕೆ ನೀಡುವ ಅಗತ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೃಪಾಂಕ ನೀಡದಿರುವುದು, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಪ್ರಮುಖ ವಿಚಾರಗಳಾಗಿವೆ ಎಂದು ಹೇಳಿದರು.

ಸಭೆಯಲ್ಲಿ ಸಂವಿಧಾನದ 371(ಜೆ) ವಿಧಿಯ ಸಮರ್ಪಕ ಅನುಷ್ಠಾನ, ಗೋವಿಂದರಾವ್ ಸಮಿತಿಯ ಶಿಫಾರಸುಗಳ ತ್ವರಿತ ಜಾರಿ, ಖಾಲಿ ಹುದ್ದೆಗಳ ಪಾರದರ್ಶಕ ಭರ್ತಿ, ಶಿಕ್ಷಣ, ಆರೋಗ್ಯ, ನೀರಾವರಿ ಮತ್ತು ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿ, ರೈಲು, ರಸ್ತೆ ಹಾಗೂ ವಿಮಾನ ಸಂಪರ್ಕದ ವಿಸ್ತರಣೆ, ಯುವಕರಿಗೆ ಹೆಚ್ಚಿನ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಅವಕಾಶ, ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನ್ಯಾಯಯುತ ಅನುದಾನ ದೊರಕಿಸುವ ಕುರಿತು ಒತ್ತು ನೀಡಲಾಗುವುದು ಎಂದರು.

ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪನೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (KKRD) ಹೆಚ್ಚಿನ ಅನುದಾನ, ಕೈಗಾರಿಕಾ ಕಾರಿಡಾರ್ ಮತ್ತು ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ, 371(ಜೆ) ಮೀಸಲು ಹುದ್ದೆಗಳ ಭರ್ತಿಯಲ್ಲಿ ಪಾರದರ್ಶಕತೆ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ನೀರಾವರಿ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸುವುದು, ಶಿಕ್ಷಣ ಸಂಸ್ಥೆಗಳು ಮತ್ತು ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ತೊಗರಿ ಮಂಡಳಿಯ ಪುನರುಜ್ಜೀವನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಗುವುದು ಎಂದು ಶರಣಬಸಪ್ಪ ಪಪ್ಪಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಹರಸೂರ, ಗೌತಮ್ ವೈಜನಾಥ ಪಾಟೀಲ್, ಕುಪೇಂದ್ರ ಪಾಟೀಲ್, ರಾಜೇಂದ್ರ ಕರಿಕಲ್, ಗಂಗಾಧರ ಕುಷ್ಟಗಿ, ಮಲ್ಲಿನಾಥ ಕಾಳಗಿ, ಓಂಪ್ರಕಾಶ್ ಹೆಬ್ಬಾಳ, ಸದ್ದಾಂ ವಜೀರಗಾಂವ್, ರವಿರಾಜ್ ಕೊರವಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News