Yedrami | ಸಾರ್ವಜನಿಕ ಶೌಚಾಲಯ ಜಾಗ ಒತ್ತುವರಿ ತೆರವಿಗೆ ಆಗ್ರಹಿಸಿ ಪಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ಯಡ್ರಾಮಿ: ಪಟ್ಟಣದ 3, 4 ಹಾಗೂ 5ನೇ ವಾರ್ಡ್‌ಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಮೀಸಲಿಟ್ಟ ಜಾಗವನ್ನು ಒತ್ತುವರಿಯಿಂದ ತೆರವುಗೊಳಿಸುವಂತೆ ಆಗ್ರಹಿಸಿ ವಾರ್ಡ್‌ನ ಮಹಿಳಾ ನಿವಾಸಿಗಳು ಸೋಮವಾರ ಪಟ್ಟಣ ಪಂಚಾಯಿತಿ (ಪಪಂ) ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
2017ರಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಾಗಿ ಜಾಗ ಗುರುತಿಸಲಾಗಿದ್ದು, ಕ್ಷೇತ್ರದ ಶಾಸಕರ 10 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಲಾಗಿತ್ತು. ಆದರೆ ಶೌಚಾಲಯ ನಿರ್ಮಾಣಕ್ಕೆ ಮೀಸಲಿಟ್ಟ ಜಾಗವನ್ನು ಕೆಲ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ಕುರಿತು ಹಲವು ಬಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 5,600ಕ್ಕೂ ಹೆಚ್ಚು ಜನರು ವಾಸಿಸುವ ಈ ಮೂರು ವಾರ್ಡ್‌ಗಳಿಗೆ ಸಾರ್ವಜನಿಕ ಶೌಚಾಲಯದ ಅಗತ್ಯವಿದ್ದು, ಒತ್ತುವರಿ ತೆರವುಗೊಳಿಸಿ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿ ಜಾಗವನ್ನು ಶೀಘ್ರದಲ್ಲೇ ತೆರವುಗೊಳಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಹಿಂಪಡೆದರು.
ಈ ವೇಳೆ ಬೋರಮ್ಮ, ಸರಿಪಾ ಚಿಂಚೋಳಿ, ದಾವಲಬಿ ಭಗವಾನ್, ಭಾಗಮ್ಮ ಚೀಲಾ, ಜ್ಯೋತಿ ಮೇಲಿನಮಠ, ಗಂಗಾಬಾಯಿ ಮೇಲಿನಮಠ, ಚೈನಾ ಚೌದರಿ, ಬಸಲಿಂಗಮ್ಮ, ಶ್ರೀದೇವಿ ಚೀಲಾ, ಸಿದ್ದಮ್ಮ ಉಪ್ಪಾರ ಸೇರಿದಂತೆ ಹಲವು ಮಹಿಳೆಯರು ಹಾಗೂ ವಾರ್ಡ್ ನಿವಾಸಿಗಳು ಇತರಿದ್ದರು.