Kalaburagi | ಜವಾಬ್ದಾರಿಯುತ ಪತ್ರಿಕೋದ್ಯಮವೇ ಪ್ರಜಾಪ್ರಭುತ್ವದ ಜೀವಾಳ: ಡಿಸಿ ಇಕ್ರಮ್ ಶರೀಫ್

'ವಾರ್ತಾ ಭಾರತಿ' ವರದಿಗಾರ ದಸ್ತಗೀರ ನದಾಫ್ ಸೇರಿದಂತೆ ಹಲವರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ

Update: 2026-07-27 20:05 IST

ಕಲಬುರಗಿ: 'ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಪತ್ರಿಕೋದ್ಯಮವು ಸಮಾಜದ ಅಭಿವೃದ್ಧಿ, ಜನಹಿತ ಮತ್ತು ಸುಶಾಸನಕ್ಕೆ ಪ್ರಮುಖ ಆಧಾರವಾಗಿದ್ದು, ಕರ್ತವ್ಯನಿಷ್ಠ ಪತ್ರಕರ್ತರ ಸೇವೆ ಪ್ರಜಾಪ್ರಭುತ್ವದ ಜೀವಾಳವಾಗಿದೆ' ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕ ವತಿಯಿಂದ ನಗರದ ಪತ್ರಿಕಾ ಭವನದ ಪತ್ರಕರ್ತರ ಸಾಂಸ್ಕೃತಿಕ ಸಭಾಂಗಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜನರ ಸಮಸ್ಯೆಗಳು, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳು ಹಾಗೂ ಅಭಿವೃದ್ಧಿಯ ಅಗತ್ಯಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಮಾಧ್ಯಮಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ. ಜನರ ವಿಶ್ವಾಸ ಗಳಿಸುವ ನಿಖರ, ವಾಸ್ತವಾಂಶ ಆಧಾರಿತ ಹಾಗೂ ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ಗ್ರೌಂಡ್ ಜರ್ನಲಿಸಂಗೆ ಒತ್ತು ನೀಡುವ ಮೂಲಕ ಜನರ ಬದುಕಿಗೆ ಹತ್ತಿರವಾದ ಸುದ್ದಿಗಳನ್ನು ನೀಡಬೇಕು. ಜಿಲ್ಲಾಡಳಿತ ಮತ್ತು ಮಾಧ್ಯಮಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ. ಪತ್ರಿಕಾರಂಗದ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಮಾತನಾಡಿ, ಪ್ರಜಾಪ್ರಭುತ್ವವನ್ನು ಸದೃಢವಾಗಿ ಉಳಿಸಿಕೊಳ್ಳುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಸುಳ್ಳು ಸುದ್ದಿ, ಡೀಪ್‌ಫೇಕ್ ಹಾಗೂ ತಪ್ಪು ಮಾಹಿತಿಗಳು ವೇಗವಾಗಿ ಹರಡುತ್ತಿರುವ ಇಂದಿನ ಸಂದರ್ಭದಲ್ಲಿ ವಿಶ್ವಾಸಾರ್ಹ ಸುದ್ದಿಗಳನ್ನು ಜನರಿಗೆ ತಲುಪಿಸುವ ಹೊಣೆ ಪತ್ರಕರ್ತರ ಮೇಲಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ಪತ್ರಕರ್ತರು ಅನೇಕ ಸವಾಲುಗಳ ನಡುವೆಯೂ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳು, ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ಸಮಕಾಲೀನ ಮಾಹಿತಿಗಳು ಅತ್ಯಂತ ಉಪಯುಕ್ತವಾಗಿವೆ ಎಂದು ಹೇಳಿದರು.

ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕೋವಿಡ್ ಮಹಾಮಾರಿಯಂತಹ ಸಂಕಷ್ಟದ ಸಂದರ್ಭದಲ್ಲಿಯೂ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಸುದ್ದಿಯ ವೇಗಕ್ಕಿಂತ ಅದರ ವಿಶ್ವಾಸಾರ್ಹತೆ ಮುಖ್ಯವಾಗಿದ್ದು, ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸುವ ಮಾನವೀಯ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರ ಹಕ್ಕುಗಳ ರಕ್ಷಣೆ, ವೃತ್ತಿ ಅಭಿವೃದ್ಧಿ ಹಾಗೂ ಸಮಾಜಮುಖಿ ಪತ್ರಿಕೋದ್ಯಮಕ್ಕೆ ಸಂಘ ಸದಾ ಬದ್ಧವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಚಂದ್ರಶೇಖರ ಕೌಲಗಾ, ಪ್ರಭಾಕರ ಜೋಶಿ, ಚಂದ್ರಕಾಂತ ಹುಣಸಗಿ, ಪ್ರವೀಣ ರೆಡ್ಡಿ ಹಾಗೂ ದೇವೇಂದ್ರಪ್ಪ ಅವಂಟಿ ಅವರಿಗೆ ವಿ.ಎನ್. ಕಾಗಲಕರ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಅದೇ ರೀತಿ 'ವಾರ್ತಾ ಭಾರತಿ' ಪತ್ರಿಕೆಯ ಜಿಲ್ಲಾ ವರದಿಗಾರ ದಸ್ತಗೀರ ನದಾಫ್ ಯಳಸಂಗಿ, ಹಿರಿಯ ವರದಿಗಾರರಾದ ಸಂಗಮನಾಥ ರೇವತಗಾಂವ, ಬ್ರಹ್ಮಾನಂದ ಅರಳಿ, ರಮೇಶ ಮೇಳಕುಂದಾ, ಬಾಬುರಾವ ಕೋಬಾಳ, ಶರಣಬಸಪ್ಪ ಅನವರ್, ದತ್ತಾತ್ರೇಯ ಪಾಟೀಲ, ಮಲ್ಲಿಕಾರ್ಜುನ ಜೋಗ್, ಸಂತೋಷ ನಾಡಗಿರಿ, ಸೋಮೇಶಗೌಡ ಪಾಟೀಲ, ಶಿವಕುಮಾರ ಕುಸಾಳೆ, ಭೀಮಣ್ಣ ಬಾಲಯ್ಯ, ಮೋಹಿಜ್ ಪಟೇಲ್, ಶರಣು ಪೂಜಾರಿ, ಸಂಗಮೇಶ ಹಿರೇಮಠ, ಶಿವಕುಮಾರ ಹಳ್ಳಿಖೇಡ, ಭೀಮಪ್ಪ ಮರಕಲ್, ಫಿರೋಜ್ ಅಹ್ಮದ್, ಸಾ.ಸಿ. ಬೆನಕನಳ್ಳಿ, ಶರಣು ಮಹಾಗಾಂವ, ವಿಜಯಕುಮಾರ ಜೆಡಗಿ, ಮಂಜುನಾಥ ದೊಡ್ಡಮನಿ, ಮಹಮದ್ ಮಶಾಕ್, ನಾಗರಾಜ ಗದ್ದಿ ಹಾಗೂ ಪ್ರಕಾಶ ಜಂಗಲೆ ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಸದಸ್ಯ ದೇವೇಂದ್ರಪ್ಪ ಕಪನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಜಕುಮಾರ ಉದನೂರ, ಭವಾನಿಸಿಂಗ್ ಠಾಕೂರ್, ಅರುಣ್ ಕದಂ, ಅಕ್ರಮ್ ಪಾಶಾ ಮೊಮಿನ್, ರಾಚಪ್ಪ ಜಂಬಗಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News