Kalaburagi | ಪತ್ನಿಗೆ ಕಿರುಕುಳ, ಜೀವ ಬೆದರಿಕೆ ಆರೋಪ: ರಾಷ್ಟ್ರ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು

Update: 2026-07-29 17:31 IST

ಕಲಬುರಗಿ: ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ವಿಚ್ಛೇದನಕ್ಕೆ ಒತ್ತಾಯಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ ಆರೋಪದಡಿ ರಾಷ್ಟ್ರ ರಕ್ಷಣಾ ಪಡೆಯ ಕಲಬುರಗಿ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಅಮರಾವತಿ ಹಾಗೂ ಆತನ ಸಹೋದರ ವಿರೇಶ್ ಅಮರಾವತಿ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋದುತಾಯಿ ಕಾಲೋನಿಯ ನಿವಾಸಿ ವಿದ್ಯಾಶ್ರೀ ಅವರು ನೀಡಿದ ದೂರಿನ ಮೇರೆಗೆ ಪುನೀತ್ ಕೆರೆಹಳ್ಳಿ ನೇತೃತ್ವದ ಸಂಘಟನೆಯಾಗಿರುವ ರಾಷ್ಟ್ರ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ದೂರಿನ ಪ್ರಕಾರ, ಸುಮಾರು ಎಂಟು ವರ್ಷಗಳ ಹಿಂದೆ ವಿದ್ಯಾಶ್ರೀ ಅವರು ಮಡಿವಾಳಪ್ಪ ಅಮರಾವತಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದು, ದಂಪತಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ಪ್ರೇಮ ವಿವಾಹ ಮಾಡಿಕೊಂಡ ಕಾರಣ ತವರು ಮನೆಯವರೊಂದಿಗೆ ಸಂಪರ್ಕ ಕಡಿತಗೊಂಡಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮದುವೆಯಾದ ಮೊದಲ ಒಂದು ವರ್ಷ ದಾಂಪತ್ಯ ಜೀವನ ಸುಗಮವಾಗಿದ್ದರೂ, ನಂತರ ಪತಿ ಮದ್ಯಪಾನ ಮಾಡಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹಲ್ಲೆ ನಡೆಸುವುದು ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ, ಬೇರೆ ಮಹಿಳೆಯರೊಂದಿಗೆ ಸಂಪರ್ಕ ಹೊಂದಿದ್ದು, ಅದನ್ನು ಪ್ರಶ್ನಿಸಿದಾಗ ವಿಚ್ಛೇದನ ನೀಡುವಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೆ, ತವರು ಮನೆಯಿಂದ ಹಣ, ಬಂಗಾರ ಹಾಗೂ ಆಸ್ತಿ ತರುವಂತೆ ಒತ್ತಾಯಿಸಿ ಕಿರುಕುಳ ನೀಡಲಾಗುತ್ತಿತ್ತು. ಪತಿಯ ಸಹೋದರ ವಿರೇಶ್ ಅಮರಾವತಿ ಕೂಡ ಜೀವ ಬೆದರಿಕೆ ಹಾಕಿ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಜೂನ್ 10ರಂದು ಸಂಜೆ ಗೋದುತಾಯಿ ಕಾಲೋನಿಯ ಬಾಡಿಗೆ ಮನೆಯಲ್ಲಿ ಮದ್ಯಪಾನದ ಅಮಲಿನಲ್ಲಿ ಮನೆ ಬಿಟ್ಟು ಹೋಗುವಂತೆ ಪತಿ ಒತ್ತಾಯಿಸಿದ್ದು, ವಿರೋಧಿಸಿದಾಗ ಹಲ್ಲೆ ನಡೆಸಿ ಕೂದಲು ಹಿಡಿದು ಹೊರಗೆ ಎಳೆದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ಬಳಿಕ ಕಾನೂನು ರಕ್ಷಣೆ ಕೋರಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಈ ನಡುವೆ, ಇದಕ್ಕೂ ಮೊದಲು ಮತ್ತೋರ್ವ ಯುವತಿಯ ದೂರಿನ ಮೇರೆಗೆ ಮಡಿವಾಳಪ್ಪ ಅಮರಾವತಿ ವಿರುದ್ಧ ಬ್ಲ್ಯಾಕ್‌ಮೇಲ್ ಆರೋಪದಡಿ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು.

ಆರೋಪಗಳನ್ನು ತಳ್ಳಿಹಾಕಿದ ಮಡಿವಾಳಪ್ಪ ಅಮರಾವತಿ :

ಈ ಕುರಿತು ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಡಿವಾಳಪ್ಪ ಅಮರಾವತಿ, ನನ್ನ ಪತ್ನಿ ಹಾಗೂ ಇನ್ನೋರ್ವ ಯುವತಿ ಸೇರಿಕೊಂಡು ನನ್ನ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಆರೋಪಗಳಿಗೆ ಯಾವುದೇ ಸತ್ಯಾಂಶವಿಲ್ಲ. ನನ್ನ ವಿರುದ್ಧ ಸಂಚು ರೂಪಿಸಿದವರು ಹಾಗೂ ಅವರಿಗೆ ಬೆಂಬಲ ನೀಡಿದವರ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಆರೋಪಗಳಿಂದ ಮುಕ್ತನಾಗುವವರೆಗೆ ಸಂಘಟನೆಯ ಜವಾಬ್ದಾರಿಗಳಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News