×
Ad

Kalaburagi | ಪೋಷಕತ್ವ ಯೋಜನೆಗೆ ಅರ್ಜಿ ಆಹ್ವಾನ; ಆಸಕ್ತ ಕುಟುಂಬಗಳಿಂದ ಮನವಿ

Update: 2026-07-05 17:37 IST

ಕಲಬುರಗಿ: 2026-27ನೇ ಸಾಲಿಗೆ ಬಾಲನ್ಯಾಯ ಕಾಯ್ದೆ ಅಡಿ ನೋಂದಣಿಯಾಗಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ ವಿವಿಧ ರೀತಿಯ ಸಂಕಷ್ಟಕ್ಕೊಳಗಾದ 6ರಿಂದ 18 ವರ್ಷದೊಳಗಿನ ಮಕ್ಕಳನ್ನು ಪೋಷಕತ್ವ ಯೋಜನೆಯಡಿ ಆರೈಕೆ ಮಾಡಲು ಆಸಕ್ತಿಯಿರುವ ಕುಟುಂಬಗಳು ಹಾಗೂ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ನಗರದ ಐವಾನ ಶಾಹಿ ಹಿಂಭಾಗ, ಚಂದ್ರಶೇಖರ ಪಾಟೀಲ ಸ್ಟೇಡಿಯಂ ಎದುರಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 08472-243219 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಬಾಲನ್ಯಾಯ ಕಾಯ್ದೆ–2015ರ ಸೆಕ್ಷನ್ 44ರ ಅನ್ವಯ, ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಮಗುವಿಗೆ ಸಂಬಂಧವಿಲ್ಲದ ಕುಟುಂಬಕ್ಕೂ ತಾತ್ಕಾಲಿಕವಾಗಿ ಅಥವಾ ಗರಿಷ್ಠ ಒಂದು ವರ್ಷದವರೆಗೆ ಪೋಷಕತ್ವದಡಿ ಮಗುವನ್ನು ನಿಯೋಜಿಸಬಹುದಾಗಿದೆ. ಮಗು ಮತ್ತು ಕುಟುಂಬದ ಹೊಂದಾಣಿಕೆಯನ್ನು ಪರಿಗಣಿಸಿ, ಅಗತ್ಯವಿದ್ದರೆ 18 ವರ್ಷದ ವಯಸ್ಸಿನವರೆಗೆ ಪೋಷಕತ್ವವನ್ನು ಮುಂದುವರಿಸಲು ಮಕ್ಕಳ ಕಲ್ಯಾಣ ಸಮಿತಿ ಅವಕಾಶ ಕಲ್ಪಿಸಬಹುದು.

ಪೋಷಕರ ಅನಾರೋಗ್ಯ, ಮರಣ ಅಥವಾ ಇತರ ಅನಿವಾರ್ಯ ಕಾರಣಗಳಿಂದ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ಸುರಕ್ಷಿತ ಕುಟುಂಬ ವಾತಾವರಣ ಕಲ್ಪಿಸುವುದು, ದತ್ತು ಸ್ವೀಕಾರಕ್ಕೆ ಒಳಪಡಲು ಸಾಧ್ಯವಾಗದ ಮಕ್ಕಳಿಗೆ ತಾತ್ಕಾಲಿಕ ಪೋಷಕರ ವ್ಯವಸ್ಥೆ ಒದಗಿಸುವುದು, ಮಕ್ಕಳ ಪುನರ್ವಸತಿ ಹಾಗೂ ಅವರನ್ನು ಸಂಸ್ಥೆಗಳಲ್ಲೇ ಉಳಿಯುವ ಪರಿಸ್ಥಿತಿಯನ್ನು ತಪ್ಪಿಸುವುದು ಪೋಷಕತ್ವ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News