×
Ad

Kalaburagi | ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

Update: 2026-05-20 17:16 IST

ಕಲಬುರಗಿ: ಕಲಬುರಗಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಂಯೋಗದೊಂದಿಗೆ ಕಲಬುರಗಿ ನಗರದ ಅಟಲ್ ಬಿಹಾರಿ ವಾಜಪಾಯಿ ಬಡಾವಣೆಯಲ್ಲಿ ಸ್ಥಾಪಿಸಲಾಗಿರುವ “ಪ್ರಬುದ್ಧ ಅಕಾಡೆಮಿ” ವತಿಯಿಂದ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ತರಬೇತಿ ಕಾರ್ಯಕ್ರಮವು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ಪದವಿ ಹೊಂದಿರುವ ಅಥವಾ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 37 ವರ್ಷಗಳ ವಯೋಮಿತಿಯೊಳಗಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-05-2026 ಆಗಿರುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಶದ ಪ್ರತಿಷ್ಠಿತ ತರಬೇತಿ ಸಂಸ್ಥೆಯಿಂದ 10 ತಿಂಗಳುಗಳ ಕಾಲ ಉಚಿತ ಮತ್ತು ಗುಣಮಟ್ಟದ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಒಳಗೊಂಡಂತೆ ಮೂರೂ ಹಂತಗಳಿಗೆ ಸಂಪೂರ್ಣ ಮಾರ್ಗದರ್ಶನವನ್ನು ನೀಡಲು ಉದ್ದೇಶಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಸಂಪೂರ್ಣ ಅರ್ಹತೆ ಮತ್ತು ಪಾರದರ್ಶಕತೆಯ ಆಧಾರದ ಮೇಲೆ 500 ವಿದ್ಯಾರ್ಥಿಗಳನ್ನು ತರಬೇತಿಗಾಗಿ ಆಯ್ಕೆ ಮಾಡಲಾಗುತ್ತದೆ.

ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಹೆಚ್ಚಿಸುವ ಮತ್ತು ಅವರಿಗೆ ಉನ್ನತ ಭವಿಷ್ಯವನ್ನು ರೂಪಿಸುವ ಮಹತ್ತರ ಉದ್ದೇಶದೊಂದಿಗೆ ಕಲಬುರಗಿಯಲ್ಲಿ ಅತ್ಯಾಧುನಿಕ ಪರೀಕ್ಷಾ ಪೂರ್ವ ತರಬೇತಿ ಕೇಂದ್ರವಾದ “ಪ್ರಬುದ್ಧ ಅಕಾಡೆಮಿ”ಯನ್ನು ಸ್ಥಾಪಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ www.kalaburagi.nic.in ಗೆ ಭೇಟಿ ನೀಡಬಹುದು.

“ಪ್ರಬುದ್ಧ ಅಕಾಡೆಮಿ”ಯು ಆಧುನಿಕ ತಂತ್ರಜ್ಞಾನ ಹೊಂದಿದ್ದು, ತಲಾ 125 ಆಸನ ಸಾಮಥ್ರ್ಯದ 4 ವಿಶಾಲವಾದ ತರಬೇತಿ ಕೊಠಡಿಗಳು ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನೊಳಗೊಂಡ ಸುಸಜ್ಜಿತ ಗ್ರಂಥಾಲಯ ಮತ್ತು ಡಿಜಿಟಲ್ ಲೈಬ್ರರಿ. ಸ್ವಯಂ ಅಧ್ಯಯನಕ್ಕಾಗಿ ಪ್ರತ್ಯೇಕ ಕ್ಯುಬಿಕಲ್ಸ್ ಮತ್ತು ತಜ್ಞರಿಂದ ವೈಯಕ್ತಿಕ ಮಾರ್ಗದರ್ಶನಕ್ಕಾಗಿ ಮೆಂಟರಿಂಗ್ ಕೊಠಡಿಗಳು. ರಿಯಾಯಿತಿ ದರದಲ್ಲಿ ಗುಣಮಟ್ಟದ ಆಹಾರ ನೀಡುವ ಉಪಹಾರ ಕೇಂದ್ರ ಮತ್ತು ಪ್ರಶಾಂತ ಶೈಕ್ಷಣಿಕ ವಾತಾವರಣಕ್ಕಾಗಿ ಸುಂದರವಾದ ಗಾರ್ಡನ್ ಸೌಲಭ್ಯ ಇರುತ್ತದೆ.

ತರಬೇತಿಯ ವಿಶೇಷತೆ :

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಸ್ತುತ ಬೇಡಿಕೆಗಳಿಗೆ ತಕ್ಕಂತೆ ಇಲ್ಲಿನ ಬೋಧನಾ ಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಪರಿಕಲ್ಪನಾತ್ಮಕ ತಿಳುವಳಿಕೆ, ವಿಶ್ಲೇಷಣಾತ್ಮಕ ಕೌಶಲ್ಯಗಳು, ಪ್ರಚಲಿತ ವಿದ್ಯಮಾನಗಳ ಆಳವಾದ ಜ್ಞಾನ ಮತ್ತು ಸಂದರ್ಶನ ಎದುರಿಸುವ ಆತ್ಮವಿಶ್ವಾಸವನ್ನು ಹೆಚ್ಚಿಸಲು ವಿಶೇಷ ಒತ್ತು ನೀಡಲಾಗುತ್ತದೆ. ಶೈಕ್ಷಣಿಕ ತರಬೇತಿಯ ಜೊತೆಗೆ ಸಮಗ್ರ ವ್ಯಕ್ತಿತ್ವ ವಿಕಸನ ಮಾರ್ಗದರ್ಶನವನ್ನೂ ನೀಡಲಾಗುತ್ತಿದ್ದು, ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮಾನತೆಯನ್ನು ತರಲು ಗಣನೀಯ ಕೊಡುಗೆ ನೀಡಲಿದೆ.

ಈ ಯೋಜನೆಯು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ನೆರವಾಗುವುದರ ಜೊತೆಗೆ, ಈ ಭಾಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಕಲಬುರಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News