×
Ad

Kalaburagi | NEET ಪ್ರಶ್ನೆಪತ್ರಿಕೆ ಸೋರಿಕೆ ಖಂಡನೆ : ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

Update: 2026-05-20 17:10 IST

ಕಲಬುರಗಿ: ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ NEET ಪರೀಕ್ಷೆಯಲ್ಲಿ ಮರು ಪ್ರಶ್ನೆಪತ್ರಿಕೆ ಸೋರಿಕೆಯಂತಹ ಗಂಭೀರ ಅಕ್ರಮಗಳು ನಡೆಯುತ್ತಿರುವುದು ಭಾರತದ ಶಿಕ್ಷಣ ವ್ಯವಸ್ಥೆಗೆ ದೊಡ್ಡ ಕಳಂಕವಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಶೇಖರ್ ಸಿಂಗ್ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ಈ ಬಾರಿ ನಡೆದಿರುವ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಸಾವಿರಾರು ವಿದ್ಯಾರ್ಥಿಗಳ ಶ್ರಮ, ಸಮಯ ಹಾಗೂ ಕನಸುಗಳು ಹಾಳಾಗಿವೆ. ವರ್ಷಪೂರ್ತಿ ಕಠಿಣ ಪರಿಶ್ರಮ ಪಟ್ಟು ಪರೀಕ್ಷೆಗೆ ಸಿದ್ಧರಾದ ವಿದ್ಯಾರ್ಥಿಗಳಿಗೆ ಇದು ಭಾರೀ ಅನ್ಯಾಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಗಂಭೀರ ವೈಫಲ್ಯದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಇಂತಹ ಅಕ್ರಮಗಳು ಪದೇಪದೇ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಅಕ್ಷಮ್ಯ ಎಂದು ಟೀಕಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಯಾವುದೇ ರಾಜಕೀಯ ಒತ್ತಡವಿಲ್ಲದೆ ತ್ವರಿತವಾಗಿ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು. ತಪ್ಪಿತಸ್ಥರಿಗೆ ಮಾದರಿ ಶಿಕ್ಷೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳು ಮತ್ತೆ ಮರುಕಳಿಸುವ ಅಪಾಯ ಇದೆ ಎಂದು ಎಚ್ಚರಿಸಿದರು.

ದುರದೃಷ್ಟವಶಾತ್, ಇಂತಹ ಅಕ್ರಮಗಳಲ್ಲಿ ಪ್ರತಿಬಾರಿಯೂ ಭಾರತೀಯ ಜನತಾ ಪಕ್ಷದ ನಾಯಕರು ಅಥವಾ ಅವರ ಬೆಂಬಲಿಗರ ಹೆಸರುಗಳು ಕೇಳಿಬರುತ್ತಿರುವುದು ಸಾರ್ವಜನಿಕರ ವಿಶ್ವಾಸ ಕುಸಿಯಲು ಕಾರಣವಾಗಿದೆ. ಆದ್ದರಿಂದ ಬಿಜೆಪಿ ಹೈಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದೊಳಗಿನ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳ ಭವಿಷ್ಯವನ್ನು ರಾಜಕೀಯ ಲಾಭಕ್ಕಾಗಿ ಬಲಿಕೊಡಲು ನಾವು ಎಂದಿಗೂ ಅವಕಾಶ ನೀಡುವುದಿಲ್ಲ. ನ್ಯಾಯ, ಪಾರದರ್ಶಕತೆ ಮತ್ತು ಸಮಾನ ಅವಕಾಶಗಳಿಗಾಗಿ ಆಮ್ ಆದ್ಮಿ ಪಕ್ಷ ಸದಾ ವಿದ್ಯಾರ್ಥಿಗಳ ಪರವಾಗಿ ನಿಂತಿರುತ್ತದೆ ಎಂದು ಶೇಖರ್ ಸಿಂಗ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News