×
Ad

Kalaburagi | ಮುಖ್ಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಶಿಕ್ಷಕರ ಸಂಘ ಒತ್ತಾಯ

Update: 2026-05-20 17:20 IST

ಕಲಬುರಗಿ: ಸ್ಥಳೀಯ ವೃಂದದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-‘ಬಿ’ ವೃಂದದ ಒಟ್ಟು 176 ಖಾಲಿ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿರುವುದನ್ನು ಖಂಡಿಸಿ, ಕೂಡಲೇ ನೇಮಕಾತಿ ಪೂರ್ಣಗೊಳಿಸಬೇಕೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಲಬುರಗಿ ಜಿಲ್ಲಾ ಘಟಕ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಬುಧವಾರ ನಗರದಲ್ಲಿರುವ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಕಲಬುರಗಿ ವಿಭಾಗದಲ್ಲಿ 2024ರ ಜನವರಿ 1ರ ಸ್ಥಿತಿಗೆ ಅನುಗುಣವಾಗಿ ನೇರ ನೇಮಕಾತಿ ಕೋಟಾದಡಿ ಖಾಲಿ ಇರುವ ಸ್ಥಳೀಯ ವೃಂದದ 146 ಹಾಗೂ ಮೂಲ ವೃಂದದ 32 ಸೇರಿ ಒಟ್ಟು 176 ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್-‘ಬಿ’ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರ ಹಾಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ಸುತ್ತೋಲೆಯ ಆಧಾರದ ಮೇಲೆ ನೇರ ನೇಮಕಾತಿಗೆ ಸಂಬಂಧಿಸಿದ ಹೊಸ ಅಧಿಸೂಚನೆಗಳನ್ನು ರದ್ದುಪಡಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಆದರೆ ಈ ಪ್ರಕ್ರಿಯೆ 2022ರಿಂದಲೇ ಆರಂಭಗೊಂಡಿದ್ದು, ಹಲವು ಆಡಳಿತಾತ್ಮಕ ಕಾರಣಗಳಿಂದ ವಿಳಂಬವಾಗುತ್ತಿದೆ ಎಂದು ಸಂಘ ದೂರಿದೆ.

ಪ್ರಸ್ತುತ ಒಳಮೀಸಲಾತಿ ಹಾಗೂ ರೋಸ್ಟರ್ ಪ್ರಕ್ರಿಯೆಯೂ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಗಣನೀಯವಾಗಿ ಕುಸಿದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಶಾಲೆಗಳಲ್ಲಿ ಸಮರ್ಪಕ ಆಡಳಿತಾತ್ಮಕ ವ್ಯವಸ್ಥೆ ಹಾಗೂ ಶೈಕ್ಷಣಿಕ ಮೇಲ್ವಿಚಾರಣೆಯ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಸಂಘ ಅಭಿಪ್ರಾಯಪಟ್ಟಿದೆ.

ತುರ್ತಾಗಿ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿದಲ್ಲಿ ಶಾಲೆಗಳ ಆಡಳಿತ ಸುಧಾರಿಸುವುದರ ಜೊತೆಗೆ ಶಿಕ್ಷಣದ ಗುಣಮಟ್ಟವೂ ಉತ್ತಮಗೊಳ್ಳಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಭಾಗದ ಪ್ರಮುಖ ಚಂದ್ರಶೇಖರ್ ಪಾಟೀಲ್, ಮಹೇಶ್ ಬಸರಕೋಡ, ಸಂಜೀವ್ ಕುಮಾರ್ ಪಾಟೀಲ್, ರವಿಕುಮಾರ್ ನರಿಬೋಳ, ಪ್ರಶಾಂತ ಸಿಂಗಾ, ಲಕ್ಕಣ್ಣ ಪೂಜಾರಿ ಹಾಗೂ ಕೆ.ಎಸ್. ರಾಹುಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News