ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 371(ಜೆ) ವರದಾನವಾಗಿದ್ದು, ಈ ಭಾಗದ ಸಮಗ್ರ ಅಭಿವೃದ್ಧಿಯ ಕನಸು ಸಾಕಾರಗೊಳ್ಳಲು ವೈಜನಾಥ ಪಾಟೀಲ ಅವರ ಹೋರಾಟದ ಕಿಚ್ಚು, ಪ್ರಿಯಾಂಕ್ ಖರ್ಗೆ ಅವರ ಕೈಚಳಕ ಹಾಗೂ ಕೇಂದ್ರ ಸಚಿವರಾಗಿ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಬದ್ಧತೆ ಕಾರಣವಾಗಿದೆ ಎಂದು ಸರ್ಕಾರಿ ಸ್ವಾಯತ್ತ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಮಲ್ಲಿಕಾರ್ಜುನ ಶೆಟ್ಟಿ ಹೇಳಿದರು.

ನಗರದ ಜೇವರ್ಗಿ ಕಾಲೋನಿಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಐಕ್ಯೂಎಸಿ ಹಾಗೂ ವಿವಿಧ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಕಲಂ 371(ಜೆ) ಐತಿಹಾಸಿಕ ವಿಶ್ಲೇಷಣೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗಾಗಿ ಶಿಕ್ಷಣ, ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳು ಒದಗಿ ಬಂದಿವೆ. ಯುವಕರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ನಾಗರಿಕ ಸಮುದಾಯ ವಿಶೇಷ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೋರಗೆ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು 371(ಜೆ) ಅಡಿಯಲ್ಲಿ ದೊರೆಯುವ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ಹುದ್ದೆಗಳನ್ನು ಪಡೆಯಲು ಸೂಕ್ತ ಅರ್ಹತೆಯೊಂದಿಗೆ ಕ್ರಿಯಾಶೀಲರಾಗಬೇಕು ಎಂದರು.

ಐಕ್ಯೂಎಸಿ ಸಂಚಾಲಕ ಡಾ. ಶರಣಬಸಪ್ಪ ಚಿಕ್ಕಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುನಂದಾ, ಡಾ. ನಿಯಾಝ ಬೇಗಂ, ಡಾ. ಅನಂತಾ, ಡಾ. ಪ್ರಕಾಶ್ ಬಡಿಗೇರ್, ಡಾ. ಸುರೇಶ್ ಬಡಿಗೇರ್, ಡಾ. ಸಂತೋಷ್ ಹೂಗಾರ, ಡಾ. ಅಣವೀರಪ್ಪ ಹಾಗೂ ಡಾ. ಅಶೋಕ ಕುಮಾರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು, ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು. ಡಾ. ಜೋತಿ ಕೆ.ಎಸ್. ಅತಿಥಿ ಪರಿಚಯಿಸಿದರು. ಕು. ಕವಿತಾ ಪ್ರಾರ್ಥಿಸಿದರು. ಡಾ. ಶೋಭಾದೇವಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಐಕ್ಯೂಎಸಿ ಸಹ ಸಂಚಾಲಕಿ ಡಾ. ವಿದ್ಯಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಬಸಮ್ಮ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor