Kalaburagi | ಕಲಾವಿದರು ಕಲಾ ಗ್ಯಾಲರಿ ಸಂಸ್ಕೃತಿಯ ಅರಿವು ಹೊಂದಿರಬೇಕು : ಡಾ.ಪರಶುರಾಮ
ಕಲಬುರಗಿ: ಕಲಾವಿದರು ಸೃಜನಶೀಲ ಚಿತ್ರಕಲಾಕೃತಿಗಳನ್ನು ರಚಿಸುವುದರ ಜತೆಗೆ ಕಲಾ ಗ್ಯಾಲರಿ ಸಂಸ್ಕೃತಿಯ ಬಗ್ಗೆಯೂ ಅರಿವು ಹೊಂದಿರಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ಅಧ್ಯಾಪಕ ಡಾ. ಪರಶುರಾಮ ಪಿ. ಹೇಳಿದರು.
ನಗರದ ರಾಮಮಂದಿರ ಹಿಂಭಾಗದಲ್ಲಿರುವ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಧನಸಹಾಯದಲ್ಲಿ ಯಾದಗಿರಿಯ ಯುವ ಚಿತ್ರಕಲಾವಿದ ತಿಪ್ಪಣ್ಣ ಜಾಧವ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಸ್ತುತ ಕಲಾ ಮಾರುಕಟ್ಟೆ, ವೀಕ್ಷಕರ ಅಭಿರುಚಿ, ಕಲಾ ವಿಮರ್ಶಕರು, ಕಲಾ ಸಂಗ್ರಾಹಕರು, ಕ್ಯೂರೇಟರ್‌ಗಳು ಹಾಗೂ ಗ್ರಾಹಕರ ಮನೋಭಾವದ ಬಗ್ಗೆ ಕಲಾವಿದರು ತಿಳಿದುಕೊಳ್ಳಬೇಕು. ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿ ನಡೆಯುವ ಸಮಕಾಲೀನ ಕಲಾ ಪ್ರದರ್ಶನಗಳ ಬಗ್ಗೆಯೂ ಅರಿವು ಹೊಂದಿರಬೇಕು ಎಂದರು.
ಚಿತ್ರಕಲಾವಿದರು ಪ್ರದರ್ಶನ ಆಯೋಜಿಸುವ ಸಂದರ್ಭದಲ್ಲಿ ಕಲಾ ಗ್ಯಾಲರಿಯ ಅಳತೆ ಮತ್ತು ವಿನ್ಯಾಸಕ್ಕೆ ಅನುಗುಣವಾಗಿ ಸೂಕ್ತ ಸಂಖ್ಯೆಯ ಕಲಾಕೃತಿಗಳನ್ನು ಯೋಗ್ಯ ವಾತಾವರಣದಲ್ಲಿ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಯುವ ಚಿತ್ರಕಲಾವಿದ ತಿಪ್ಪಣ್ಣ ಜಾಧವ ಅವರ ವರ್ಣಚಿತ್ರಗಳಲ್ಲಿ ಭಾರತದ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಚಿತ್ರಕಲಾ ಶೈಲಿಗಳ ಪ್ರಭಾವ ಹಾಗೂ ಪ್ರೇರಣೆ ಕಂಡುಬರುತ್ತದೆ. ಮುಂದಿನ ದಿನಗಳಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡು ಗಂಭೀರ ಹಾಗೂ ಗುಣಮಟ್ಟದ ಕಲಾಕೃತಿಗಳನ್ನು ರಚಿಸಲಿ ಎಂದು ಆಶಿಸಿದರು.
ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಶಾಮತಮಲ್ಲ ಶಿವಭೋ ಅವರು ಪ್ರದರ್ಶನಕ್ಕೆ ಚಾಲನೆ ನೀಡಿ, ಉತ್ತಮ ಕಲಾಕೃತಿ ರಚನೆಯ ಹಿಂದೆ ಕಲಾವಿದನ ಅಪಾರ ಪರಿಶ್ರಮವಿರುತ್ತದೆ. ಹಗಲು-ರಾತ್ರಿ ಎನ್ನದೆ ಶ್ರಮಿಸಿ ಕಲಾಕೃತಿ ರಚಿಸಿದಾಗ ಕಲಾವಿದನ ಜೀವನ ಸಾರ್ಥಕವಾಗುತ್ತದೆ ಎಂದರು.
ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಶೈಲಜಾ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿತ್ರಕಲೆ ಕೇವಲ ಬಣ್ಣಗಳ ಸಮ್ಮಿಶ್ರಣವಲ್ಲ. ಯಾವುದೇ ಭಾಷೆಯ ಹಂಗಿಲ್ಲದೆ ನೇರವಾಗಿ ನೋಡುಗನ ಹೃದಯವನ್ನು ತಲುಪುವ ಶಕ್ತಿ ಚಿತ್ರಕಲೆಗಿದೆ. ಕಲೆ, ಸಂಸ್ಕೃತಿ, ಇತಿಹಾಸ ಹಾಗೂ ಭಾವನೆಗಳ ಜೀವಂತ ದಾಖಲೆಯಾಗಿದೆ ಎಂದು ಹೇಳಿದರು.
ಚಿತ್ರಕಲಾವಿದ ತಿಪ್ಪಣ್ಣ ಜಾಧವ ಮಾತನಾಡಿದರು.
ಕಲಾವಿದರಾದ ಶಿವಾನಂದ ಬಂಟನೂರ, ಸಿವಾನಂದ ಕೊಪ್ಪದ, ದೌಲತರಾಯ ದೇಸಾಯಿ, ಕುಪೇಂದ್ರ, ಗಿರೀಶ್ ಕುಲಕರ್ಣಿ, ದಾನಯ್ಯ ಚೌಕಿಮಠ, ಮಲ್ಲಿಕಾರ್ಜುನ ಕೋರಳ್ಳಿ, ಶಶಿಕಾಂತ ಪಾಟೀಲ್, ವಿಜಯ ಅವರಾದ, ಕಾವ್ಯ ಗಡ್ಡಿ, ಸಿದ್ಧರಾಮಯ್ಯ, ಅಭಿಜಿತ ಎಸ್. ಕೆ ಸೇರಿದಂತೆ ಕಲಾ ವಿದ್ಯಾರ್ಥಿಗಳು ಹಾಗೂ ಕಲಾಸಕ್ತರು ಭಾಗವಹಿಸಿದ್ದರು. ಕಲಾವಿದ ಸೂರ್ಯಕಾಂತ ನಂದೂರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.