Kalaburagi | ಕರ್ತವ್ಯ ಲೋಪ ಆರೋಪ : ಅಶೋಕ ನಗರ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು
ಕಲಬುರಗಿ: ನಗರದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮನುಷ್ಯ ಕಾಣೆಯಾದ ಪ್ರಕರಣ ತನಿಖೆ ವೇಳೆ ಕೊಲೆ ಪ್ರಕರಣವಾಗಿ ಬದಲಾಗಿರುವ ಹಿನ್ನೆಲೆಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಸಂಗ್ರಹಿಸುವಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ಸಿಬ್ಬಂದಿಯನ್ನು ನೀಲಕಂಠ ಪಾಟೀಲ್ (ಸಿಪಿಸಿ–531) ಹಾಗೂ ಚಂದ್ರಶೇಖರ್ (ಸಿಪಿಸಿ–250) ಎಂದು ಗುರುತಿಸಲಾಗಿದೆ.
ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗುನ್ನೆ ನಂ.101/2026ರ ಮನುಷ್ಯ ಕಾಣೆಯಾದ ಪ್ರಕರಣದ ತನಿಖೆ ಮುಂದುವರಿದ ಸಂದರ್ಭದಲ್ಲಿ ಅದು ಕೊಲೆ ಪ್ರಕರಣವೆಂದು ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಸಮರ್ಪಕವಾಗಿ ಸಂಗ್ರಹಿಸುವಲ್ಲಿ ಇಬ್ಬರು ಸಿಬ್ಬಂದಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ, ಇಲಾಖಾ ಶಿಸ್ತಿನ ಕ್ರಮ ಬಾಕಿಯಿರಿಸಿ ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಆದೇಶ ಹೊರಡಿಸಿದ್ದಾರೆ.