Kalaburagi | ಕನ್ನಡದ ಉಳಿವಿಗೆ ಪ್ರತಿಯೊಬ್ಬರೂ ಬದ್ಧರಾಗಬೇಕು: ಡಾ.ಮಲ್ಲಣ್ಣಪ್ಪ ಮಹಾಸ್ವಾಮೀಜಿ
ಕಲಬುರಗಿ: ಕನ್ನಡ ಭಾಷೆ, ನಾಡು ಹಾಗೂ ನುಡಿಯ ಸಂರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗರೂ ಬದ್ಧರಾಗಿ ಕಾರ್ಯನಿರ್ವಹಿಸಬೇಕು ಎಂದು ಅಲ್ಲಮಪ್ರಭು ಸಂಸ್ಥಾನ ಮಠ, ತೋನಸನಹಳ್ಳಿ ಧರ್ಮರತ್ನ ಡಾ.ಮಲ್ಲಣ್ಣಪ್ಪ ಮಹಾಸ್ವಾಮೀಜಿ ಕರೆ ನೀಡಿದರು.
ನಗರದ ಕನ್ನಡ ಭವನದಲ್ಲಿ ಜೈ ಕರ್ನಾಟಕ ಜನಪರ ಸಮಿತಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಹೋರಾಟ, ಸಾಮಾಜಿಕ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಗಮನಾರ್ಹ ಸಾಧನೆ ಮಾಡಿದ 36 ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಭಾವನೆಯೊಂದಿಗೆ ಕನ್ನಡ ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು. ಕನ್ನಡಕ್ಕೆ ಸುಮಾರು 2,500 ವರ್ಷಗಳ ಪ್ರಾಚೀನ ಇತಿಹಾಸವಿದ್ದು, ಶಾಸ್ತ್ರೀಯ ಭಾಷೆಯ ಸ್ಥಾನಮಾನವೂ ದೊರೆತಿದೆ. ಕುವೆಂಪು, ನಿಸಾರ್ ಅಹ್ಮದ್, ಬಸವಣ್ಣ, ಶರೀಫರು ಸೇರಿದಂತೆ ಅನೇಕ ಕವಿಗಳು ಹಾಗೂ ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕನ್ನಡ ಭಾಷೆ ಜಾತಿ, ಧರ್ಮ ಹಾಗೂ ಭಾಷೆಯ ಎಲ್ಲ ಮಿತಿಗಳನ್ನು ಮೀರಿ ಜನರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ. ಕನ್ನಡದ ವಿಶಿಷ್ಟ ಪರಂಪರೆ ಮತ್ತು ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಮಹಾಲಕ್ಷ್ಮಿ ಶಕ್ತಿ ಪೀಠ, ಶ್ರೀನಿವಾಸ ಸರಡಗಿಯ ಪರಮಪೂಜ್ಯ ಡಾ. ಅಪ್ಪಾರಾವ ದೇವಿ ಮುತ್ಯಾ ಮಹಾರಾಜರು ಮಾತನಾಡಿ, ಸಮಾಜ ಹಾಗೂ ದೇಶಕ್ಕಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸಲು ಪ್ರೇರಣೆಯಾಗುತ್ತವೆ ಎಂದರು.
ಮಣೂರು ಆಸ್ಪತ್ರೆಯ ನಿರ್ದೇಶಕ ಡಾ. ಫಾರೂಕ್ ಅಹ್ಮದ್ ಮಣೂರ್ ಮಾತನಾಡಿ, ಸಿದ್ದು (ಗೌತಮ) ಎಚ್. ಜಮಾದಾರ್ ಅವರು ವಿವಿಧ ಜಾತಿ, ಧರ್ಮ ಹಾಗೂ ವರ್ಗದ ಜನರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಕನ್ನಡಪರ ಹೋರಾಟದ ಜತೆಗೆ ಕಲ್ಯಾಣ ಕರ್ನಾಟಕದ ನಿರುದ್ಯೋಗ, ಕುಡಿಯುವ ನೀರು, ರೈತರ ಸಮಸ್ಯೆ ಸೇರಿದಂತೆ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೂ ಸಂಘಟನೆಗಳು ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ್ ಮಾತನಾಡಿ, ಕನ್ನಡಪರ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ವಿವಿಧ ವರ್ಗದ ಜನರನ್ನು ಒಂದೆಡೆ ಸೇರಿಸುತ್ತಿರುವ ಸಿದ್ದು (ಗೌತಮ) ಜಮಾದಾರ್ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಶಿವಾನಂದ ಆರ್. ಹೋನಗುಂಟಿ, ಸಂತೋಷ ಎಸ್. ಬೆಣ್ಣೂರು, ಮಲ್ಲಿಕಾರ್ಜುನ ವಾಲಿಕಾರ, ಶಿವಲಿಂಗ ಹಳಿಮನಿ, ಸಂದೀಪ್ ಭರಣಿ, ರವಿ ದೇಗಾಂವ, ಶಿವಕುಮಾರ್ ಎಂ. ಮುಡ್ಡಿ, ಅಂಬಾಜಿ ಪಿ. ಮೇಟಿ, ನಾಗೇಶ್ ಸಿ. ವಡಗೇರಿ, ಶಿವಾನಂದ ಉಪ್ಪಿನ್ ಸಾಹುಕಾರ್, ಬಸಲಿಂಗಪ್ಪ ಖಾನಾಪೂರ, ಸುಭಾಸಚಂದ್ರ ದುಕಾನದಾರ, ಎಂ.ಎ. ಸಿದ್ದಿಕ್, ರಾಜೇಶ್ ಬಿ. ಹಡಗಿಲ್ಕರ್, ಶರಣು ಜಮಾದಾರ್, ಆನಂದ ಕದ್ದರಗಿ, ಗೌತಮ್ ಸಂಗೋಳಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೋರಾಟ, ಸಾಮಾಜಿಕ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ 36 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.