Kalaburagi | ಜಿಮ್ಸ್‌ನಲ್ಲಿ 350 ವಿದ್ಯಾರ್ಥಿನಿಯರಿಗೆ ಉಚಿತ ಎಚ್‌ಪಿವಿ ಲಸಿಕೆ
ಎಚ್‌ಪಿವಿ ಲಸಿಕೆಯಿಂದ ಗರ್ಭಕಂಠದ ಕ್ಯಾನ್ಸರ್ ತಡೆ ಸಾಧ್ಯ : ಡಾ.ಉಮೇಶ್ ಎಸ್.ಆರ್.
ಕಲಬುರಗಿ: ಗರ್ಭಕಂಠದ ಕ್ಯಾನ್ಸರ್ ಮಹಿಳೆಯರನ್ನು ಕಾಡುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಯಾಗಿದ್ದು, ಸೋಂಕು ತಗುಲುವ ಮುನ್ನವೇ ಎಚ್‌ಪಿವಿ ಲಸಿಕೆ ಪಡೆಯುವುದರಿಂದ ಕಾಯಿಲೆಯ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಕಲಬುರಗಿ ಜಿಮ್ಸ್ ನಿರ್ದೇಶಕ ಡಾ. ಉಮೇಶ್ ಎಸ್.ಆರ್. ಹೇಳಿದರು.
ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ನೇತೃತ್ವದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿನಿಯರಿಗಾಗಿ ಬುಧವಾರ ಆಯೋಜಿಸಿದ್ದ ಉಚಿತ ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್‌ಪಿವಿ) ಲಸಿಕಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಜಿಮ್ಸ್ ಉಪ ವೈದ್ಯಕೀಯ ಅಧೀಕ್ಷಕಿ ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ. ಉಷಾ ದೊಡ್ಡಮನಿ ಮಾತನಾಡಿ, ಹೆಚ್ಚಿನ ಅಪಾಯ ಉಂಟುಮಾಡುವ ಎಚ್‌ಪಿವಿ ವೈರಸ್‌ನ 16 ಮತ್ತು 18ನೇ ವಿಧಗಳ ದೀರ್ಘಕಾಲದ ಸೋಂಕು ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಸೋಂಕು ತಗುಲುವ ಮುನ್ನ ಲಸಿಕೆ ಪಡೆಯುವುದರಿಂದ ಗರ್ಭಕಂಠದ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸಲು ಸಾಧ್ಯ. ಜಿಮ್ಸ್‌ನಲ್ಲಿ ನಡೆಯುತ್ತಿರುವ ಅಭಿಯಾನದಡಿ ಸುಮಾರು 350 ವಿದ್ಯಾರ್ಥಿನಿಯರಿಗೆ ಎಚ್‌ಪಿವಿ ಲಸಿಕೆಯ ಮೂರು ಡೋಸ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಜಿಮ್ಸ್ ಪ್ರಾಂಶುಪಾಲ ಡಾ. ಜಿ.ಬಿ. ದೊಡ್ಡಮನಿ ಮಾತನಾಡಿ, ವಿದ್ಯಾರ್ಥಿನಿಯರ ಆರೋಗ್ಯ ಮತ್ತು ಕ್ಷೇಮಕ್ಕೆ ಸಂಸ್ಥೆ ಆದ್ಯತೆ ನೀಡುತ್ತಿದೆ. ಆರೋಗ್ಯ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹಣಕಾಸು ಸಲಹೆಗಾರರು ಹಾಗೂ ಮುಖ್ಯ ಲೆಕ್ಕಾಧಿಕಾರಿ ಭಾರತಿ, ಶೈಕ್ಷಣಿಕ ರಿಜಿಸ್ಟ್ರಾರ್ ಡಾ. ಫರ್ಖಾನಾ ಖುಶ್ನೂದ್, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.