Aland | ಸಿಯುಕೆನಲ್ಲಿ ನೂತನ ಕಂಪ್ಯೂಟಿಂಗ್, ಎಚ್‌ಪಿಸಿ ಪ್ರಯೋಗಾಲಯ ಉದ್ಘಾಟನೆ

Update: 2026-08-19 19:20 IST

ಆಳಂದ: ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಗಣಿತ ವಿಭಾಗದಲ್ಲಿ ನೂತನವಾಗಿ ಸ್ಥಾಪಿಸಲಾದ ಕಂಪ್ಯೂಟಿಂಗ್ ಪ್ರಯೋಗಾಲಯ, ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (ಎಚ್‌ಪಿಸಿ) ಪ್ರಯೋಗಾಲಯ ಹಾಗೂ ರಾಷ್ಟ್ರೀಯ ಉನ್ನತ ಗಣಿತ ಮಂಡಳಿ (ಎನ್‌ಬಿಎಚ್‌ಎಂ) ಗ್ರಂಥಾಲಯವನ್ನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಿ.ಟೆಕ್. ಗಣಿತ ಮತ್ತು ಕಂಪ್ಯೂಟಿಂಗ್ ವಿದ್ಯಾರ್ಥಿಗಳಿಗಾಗಿ ದೇಶ ಹಾಗೂ ವಿದೇಶಗಳಲ್ಲಿ ಲಭ್ಯವಿರುವ ಉನ್ನತ ಶಿಕ್ಷಣ ಮತ್ತು ವೃತ್ತಿ ಅವಕಾಶಗಳ ಕುರಿತು ‘ನಿಮ್ಮ ವೃತ್ತಿ ಪಥ ರೂಪಿಸಿಕೊಳ್ಳಿ’ ಎಂಬ ವೃತ್ತಿ ಮಾರ್ಗದರ್ಶಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಜನಾರ್ದನ ರೆಡ್ಡಿ ಮಾತನಾಡಿ, ನೂತನ ಕಂಪ್ಯೂಟಿಂಗ್ ಹಾಗೂ ಎಚ್‌ಪಿಸಿ ಪ್ರಯೋಗಾಲಯಗಳು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಸಂಶೋಧನಾ ಕಾರ್ಯಗಳಿಗೆ ನೆರವಾಗಲಿವೆ. ಎನ್‌ಬಿಎಚ್‌ಎಂ ಗ್ರಂಥಾಲಯವು ಗಣಿತ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನೆಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಲಿದೆ ಎಂದರು.

ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕ ಪ್ರೊ. ಭರತ್ ಕುಮಾರ್, ಭೌತ ವಿಜ್ಞಾನ ನಿಕಾಯದ ಡೀನ್ ಪ್ರೊ. ರಾಜೀವ್ ಶೇಷ ಜೋಶಿ ಹಾಗೂ ಕೇಂದ್ರ ಗ್ರಂಥಪಾಲಕ ಡಾ. ಪಿ.ಎಸ್. ಕಟ್ಟಿಮನಿ ಮಾತನಾಡಿದರು.

ನೂತನ ಸೌಲಭ್ಯಗಳು ವಿದ್ಯಾರ್ಥಿಗಳಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಗಣಿತ ಸಂಶೋಧನೆಯತ್ತ ಆಸಕ್ತಿ ಹೆಚ್ಚಿಸುವುದರ ಜತೆಗೆ, ಉನ್ನತ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಕಾರ್ಯಕ್ರಮವು ‘ವಂದೇ ಮಾತರಂ’ದೊಂದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು. ಡಾ. ಮೇಘಾ ಖಂಡೇಲ್ವಾಲ್ ನಿರೂಪಿಸಿದರು. ಡಾ. ಸುಮುಖ ಎಸ್. ವಂದನಾರ್ಪಣೆ ಸಲ್ಲಿಸಿದರು.

ಗಣಿತ ವಿಭಾಗದ ಡಾ. ಎನ್.ಸಂದೀಪ್, ಡಾ.ಶ್ರೀನಿವಾಸುಲು ಬಲ್ಲೆಮ್, ಡಾ.ರಂಗನಾಥ ಡಿ., ಡಾ.ಸಮೀರ್ ಕರ್, ಡಾ.ದೇವಿಕಾ ದಾಬ್ಕೆ, ತಾಂತ್ರಿಕ ಸಹಾಯಕ ಶಶಿಕಾಂತ ಸೇರಿದಂತೆ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News