ಅ.2ರಂದು ಕಲಬುರಗಿಯಲ್ಲಿ ಗಾಂಧಿ ವಿಚಾರಧಾರೆ ಕುರಿತು ವಿಶೇಷ ಉಪನ್ಯಾಸ
ಕಲಬುರಗಿ: ಮಹಾತ್ಮ ಗಾಂಧೀಜಿಯವರ 157ನೇ ಜನ್ಮ ವರ್ಷಾಚರಣೆ ಅಂಗವಾಗಿ ಗಾಂಧಿ ವಿಚಾರ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಅ.2ರಂದು ನಗರದ ಎರಡು ಪ್ರಮುಖ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಗಾಂಧೀಜಿಯವರ ಸತ್ಯ, ಅಹಿಂಸೆ, ಶ್ರಮದ ಮಹತ್ವ ಹಾಗೂ ಸ್ವಾವಲಂಬಿ ಜೀವನ ಕ್ರಮದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ಎಸ್.ಎಸ್. ತೆಗನೂರು ಪದವಿ ಮಹಾವಿದ್ಯಾಲಯ ಹಾಗೂ ದೊಡ್ಡಪ್ಪ ಅಪ್ಪ ವಸತಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ವಿದ್ಯಾರ್ಥಿಗಳಲ್ಲಿ ಗಾಂಧೀಜಿಯವರ ವಿಚಾರಧಾರೆ, ಸತ್ಯ ಮತ್ತು ಅಹಿಂಸೆಯ ತತ್ವಗಳ ಕುರಿತು ಅರಿವು ಮೂಡಿಸುವುದರ ಜತೆಗೆ, ಇಂದಿನ ಸಂದರ್ಭದಲ್ಲಿ ಅವುಗಳ ಪ್ರಸ್ತುತತೆ ಕುರಿತು ಸಂವಾದ ನಡೆಸಲಾಗುವುದು ಎಂದು ಗಾಂಧಿ ವಿಚಾರ ವೇದಿಕೆ ಕಲಬುರಗಿ ಘಟಕದ ಕಾರ್ಯದರ್ಶಿ ಗಿರೀಶ ಪಾಟೀಲ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಗಾಂಧೀಜಿ ವಿಚಾರಧಾರೆಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.