ಹಸಿ ಬರಗಾಲ ಘೋಷಿಸುವಂತೆ ಆಗ್ರಹಿಸಿ ಕಲಬುರಗಿ ಬಂದ್; ಉತ್ತಮ ಪ್ರತಿಕ್ರಿಯೆ
ಅಂಗಡಿಗಳು ಸ್ವಯಂಪ್ರೇರಿತ ಬಂದ್, ರಸ್ತೆಗೆ ಇಳಿಯದ ಬಸ್; ಪ್ರಯಾಣಿಕರ ಪರದಾಟ
ಕಲಬುರಗಿ: ನೆರೆ ಹಾವಳಿಗೆ ತುತ್ತಾಗಿರುವ ಕಲಬುರಗಿ ಜಿಲ್ಲೆಯನ್ನು ಹಸಿ ಬರಗಾಲ ಎಂದು ಘೋಷಣೆ ಮಾಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕರೆ ನೀಡಿರುವ ಕಲಬುರಗಿ ಬಂದ್ ಗೆ ಸೋಮವಾರ ಬೆಳ್ಳಂ ಬೆಳಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ಅಂಗವಾಗಿ ಪ್ರತಿಭಟನಾಕಾರರು ನಗರದ ಕೇಂದ್ರೀಯ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸುತ್ತಿದ್ದು, ನೆರೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ಈ ಭಾಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಒಂದೇ ಒಂದು ರೂಪಾಯಿ ಬಿಡುಗಡೆ ಮಾಡದೆ ಇರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್:
ಕಲಬುರಗಿ ಬಂದ್ ಗೆ ಕರೆ ನೀಡಿರುವ ಬೆನ್ನಲ್ಲೆ ಇಲ್ಲಿನ ವ್ಯಾಪಾರಸ್ಥರು, ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಸ್ತೆಗೆ ಇಳಿಯದ ಬಸ್ ಗಳು; ಪ್ರಯಾಣಿಕರ ಪರದಾಟ:
ಬಂದ್ ನಿಮಿತ್ತ ರಾಜ್ಯ ಸಾರಿಗೆ ಸಂಚಾರದ ಹಾಗೂ ನಗರ ಸಾರಿಗೆಯ ಬಸ್ ಗಳು ನಗರದಲ್ಲಿ ರಸ್ತೆಗೆ ಇಳಿಯಲಿಲ್ಲ. ಇದರಿಂದಾಗಿ ದೂರದ ಸ್ಥಳಗಳಿಗೆ ತೆರಳುವ ಪ್ರಯಾಣಿಕರು, ಕಾಲೇಜಿನ ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ಎದುರಾಯಿತು.
ಬೆಳ್ಳಂಬೆಳಗ್ಗಿನ ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡ್ಯಾಳ, ಮೌಲಾ ಮುಲ್ಲಾ, ದಯಾನಂದ ಪಾಟೀಲ್, ನಾಗೇಂದ್ರ ಥoಬೆ, ಸಾಜಿದ್, ಪ್ರಭುದೇವ ಯಳಸಂಗಿ ಸೇರಿದಂತೆ ಹಲವು ಹೋರಾಟಗಾರರು ಬಸ್ ನಿಲ್ದಾಣದ ಎದುರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.