ಕಲಬುರಗಿ | ಬೆಳೆ ಪರಿಹಾರಕ್ಕಾಗಿ ಆಗ್ರಹಿಸಿ ಡಿ.23ರಂದು ಧರಣಿ ಸತ್ಯಾಗ್ರಹ: ರಾಜಕುಮಾರ್ ಪಾಟೀಲ್
ಕಲಬುರಗಿ(ಸೇಡಂ): ಅತಿವೃಷ್ಠಿಯಿಂದ ಹಾನಿಗೊಳಗಾದ ಎಲ್ಲ ರೈತರಿಗೆ ಬೆಳೆಪರಿಹಾರವನ್ನು ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳು ಈಡೇರಿಸಬೇಕೆಂದು ಆಗ್ರಹಿಸಿ, ಸೇಡಂ ತಾಲೂಕು ಬಿಜಿಪಿ ಘಟಕದ ವತಿಯಿಂದ ಡಿ.23 ರಂದು ಇಲ್ಲಿನ ಮಿನಿ ವಿಧಾನಸೌದ ಆವರಣದಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ ಮಳೆ ಹಾಗೂ ಪ್ರವಾಹದಿಂದ ಅಪಾರ ಪ್ರಾಮಾಣದ ಬೆಳೆಹಾನಿಯಾಗಿದೆ. ಆದರೆ ಸರಕಾರಿ ಅಧಿಕಾರಿಗಳು ಮಾಡಿದ ಅವೈಜ್ಞಾನಿಕ ಸಮೀಕ್ಷೆಯಿಂದ ಸಾಕಷ್ಟು ರೈತರಿಗೆ ಬೆಳೆಪರಿಹಾರ ದೊರಕಿಲ್ಲ. ಸೇಡಂ ಕ್ಷೇತ್ರದಲ್ಲಿ ಒಟ್ಟಾರೆಯಾಗಿ 46 ಸಾವಿರ ಹೆಕ್ಟರ್ ಬೆಳೆ ಹಾನಿಯಾಗಿದ್ದರೆ, ಅಧಿಕಾರಿಗಳು ಕೇವಲ 30 ಸಾವಿರ ಹೆಕ್ಟೇರ್ ನಲ್ಲಿ ಬೆಳೆ ನಷ್ಟವಾಗಿದೆ ಎಂದು ವರದಿ ನೀಡಿದ್ದಾರೆ. ಇದರಿಂದ ರೈತರಿಗೆ ಬಿಡಿಗಾಸು ಜಮೆಯಾಗುವ ಮೂಲಕ ಸಂಕಷ್ಟದಲ್ಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕು ಆಡಳಿತ ನಡೆಸಿದ ಸಮೀಕ್ಷೆಯ ಲೆಕ್ಕದಂತೆ ಎಕರೆಗೆ 17 ಸಾವಿರ ರೂ. ಹಣ ಬಿಡುಗಡೆಯಾದರೂ ಕೂಡ, ಸೇಡಂ ತಾಲೂಕಿನಲ್ಲಿ ಸುಮಾರು 50 ಕೋಟಿ ರೂ. ಬೆಳೆಪರಿಹಾರ ಬರಬೇಕಿತ್ತು, ಆದರೆ ಇಲ್ಲಿಯವರೆಗೆ ಕೇವಲ 22 ಕೋಟಿ ರೂ. ಪರಿಹಾರ ಮಾತ್ರ ಬಂದಿದೆ. ಇನ್ನು ಕೆಲ ರೈತರಿಗೆ ಪರಿಹಾರವೇ ಬಂದಿಲ್ಲ. ಹೀಗಾಗಿ ಎಂಟು ದಿನಗಳೊಳಗಾಗಿ ತಾಲೂಕು ಆಡಳಿತ ಮತ್ತೊಮ್ಮೆ ಸಮೀಕ್ಷೆ ನಡೆಸಿ ಎಲ್ಲ ರೈತರಿಗೂ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಶರಣು ಮೆಡಿಕಲ್, ಸತೀಶ್ ಪಾಟೀಲ್ ತರನಳ್ಳಿ, ಓಂಪ್ರಕಾಶ ಪಾಟೀಲ್, ನಾಗಪ್ಪ ಕೊಳ್ಳಿ, ವಿರೇಶ ಹೂಗಾರ್, ರಾಘವೇಂದ್ರ ಮೆಕಾನಿಕ್, ಶ್ರೀಮಂತ ಆವಂಟಿ, ಜೈ ಪ್ರಕಾಶ, ಶಿವಕುಮಾರ್ ಪಾಗ, ರಾಮು ನಾಯಕ್, ಶಿವಾನಂದ ಸ್ವಾಮಿ ಸೇರಿದಂತೆ ಇನ್ನಿತರರಿದ್ದರು.