×
Ad

ಕಲಬುರಗಿ | ವಿಚಿತ್ರ ರೋಗದಿಂದ ತೊಗರಿ ನಾಶ: ಸಂಶೋಧನೆಗೆ ವಿಜ್ಞಾನಿಗಳ ತಂಡ ಕಳುಹಿಸಲು ಬಿ.ಆರ್.ಪಾಟೀಲ್ ಆಗ್ರಹ

Update: 2024-11-21 16:43 IST

ಕಲಬುರಗಿ : ಜಿಲ್ಲೆಯಲ್ಲಿ ಈ ಸಲ ತೊಗರಿ ಬೇಳೆ ಚೆನ್ನಾಗಿ ಬೆಳೆದಿತ್ತು, ಕೆಲ ದಿನಗಳಿಂದ ವಿಚಿತ್ರ ರೋಗದಿಂದ ತೊಗರಿ ನಾಶವಾಗುತ್ತಿದೆ, ಕೂಡಲೇ ಇದರ ಕುರಿತು ಸಂಶೋಧನೆಗೆ ಕೇಂದ್ರದಿಂದ ವಿಶೇಷ ವಿಜ್ಞಾನಿಗಳ ತಂಡ ಕಳುಹಿಸಬೇಕು ಎಂದು ಸಿಎಂ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ್ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯದಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳು ಸೇರಿದಂತೆ ಆಳಂದ ತಾಲ್ಲೂಕಿನಲ್ಲಿ ಬಹಳಷ್ಟು ತೊಗರಿ ಬೆಳೆ ನಾಶವಾಗುತ್ತಿದೆ, ಇಷ್ಟು ದಿನ ಚೆನ್ನಾಗಿದ್ದು ಈಗ ದಿಢೀರನೆ ಹಾನಿಯಾಗುತ್ತಿದೆ. ಎಂದೂ ಕಂಡಿಲ್ಲದ ರೋಗ ಬಂದಿದ್ದರಿಂದ ಈ ಸಲದ ತೊಗರಿ ರೈತನಿಗೆ 'ಕೈಗೆ ಬಂದ ತುತ್ತು ಬಾಯಿಗೆ ಬರದಂತೆ' ಕಾಣುತ್ತಿದೆ ಎಂದು ಹೇಳಿದರು.

4 ಎಕರೆಯಲ್ಲಿ ತೊಗರಿ ಬೆಳೆ ಬಿತ್ತಿದ್ದ ರೈತನೋರ್ವ ತನ್ನ ಹೊಲದಲ್ಲೂ ಬೆಳೆ ಸಂಪೂರ್ಣ ನಾಶವಾಗಿದ್ದರಿಂದ ತಾನು ದಿಕ್ಕುತೋಚದೆ ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ನನ್ನ ಮುಂದೆ ಅಳಲು ತೋಡಿಕೊಂಡಿದ್ದಾನೆ. ನಾನು ಆತನಿಗೆ ಸಮಾದಾನಿಸಿದ್ದೇನೆ, ಈ ಕೂಡಲೇ ಸರಕಾರದಿಂದ ಪರಿಹಾರ ಒದಗಿಸುವಂತೆ ಅಗ್ರಹಿಸುವುದಾಗಿ ತಿಳಿಸಿದ್ದೇನೆ ಎಂದರು.

ಆಳಂದ ತಾಲ್ಲೂಕಿನಲ್ಲಿ 2 ಲಕ್ಷ, 40 ಸಾವಿರ ಎಕರೆ ತೊಗರಿ ಬಿತ್ತನೆಯಾಗಿದೆ, ಹಲವೆಡೆ ಭೇಟಿ ನೀಡಿ, ತೊಗರಿ ವೀಕ್ಷಿಸಿದ್ದೇನೆ. ಬಳಿಕ ಈ ತೊಗರಿಯ ನಾಶ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ, ಇದು ನೇಟೆ ರೋಗವೂ ಇಲ್ಲ ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ಈ ವಿಚಿತ್ರ ರೋಗದ ಬಗ್ಗೆ ಶೋಧನೆಗೆ ಕೇಂದ್ರದಿಂದ ವಿಶೇಷ ವಿಜ್ಞಾನಿಗಳ ತಂಡ ಕಳುಹಿಸಬೇಕೆಂದು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ 15 ಲಕ್ಷ ಎಕರೆ ತೊಗರಿ ಬಿತ್ತನೆಯಾಗಿದ್ದು, ಅದರಲ್ಲಿ ತೊಗರಿಗೆ 1 ಲಕ್ಷ 70 ಸಾವಿರ ರೈತರು ತೊಗರಿಗೆ ವಿಮೆ ಮಾಡಿಸಿದ್ದಾರೆ. ಹಲವು ರೈತರು ವಿಮೆ ಸಹ ಮಾಡಿಕೊಂಡಿಲ್ಲ, ನೀರಾವರಿ, ಒಣಭೂಮಿಯಲ್ಲಿ ತೊಗರಿ ಒಣಗುತ್ತಿರುವುದರಿಂದ ರೈತರು ಭಾರೀ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಬೆಳಗಾವಿಯ ಅಧಿವೇಶನಕ್ಕಿಂತ ಮೊದಲು ಕೇಂದ್ರ ಮತ್ತು ರಾಜ್ಯ ಸರಕಾರ ರೈತರಿಗೆ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗುರುಲಿಂಗಪ್ಪ ಜಂಗಮಶೆಟ್ಟಿ, ಬಸವರಾಜ್ ಉಪ್ಪಿನ, ಶರಣಬಸಪ್ಪ ಪಾಟೀಲ್, ಸತೀಶ್ ಪಡಶೆಟ್ಟಿ, ನಾಗನಾಥ ಮತ್ತಿತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News