ಕಲಬುರಗಿ ಪಾಲಿಕೆ ವಲಯ ಆಯುಕ್ತರ ವಿರುದ್ಧ ಸಿಬ್ಬಂದಿ ಆಕ್ರೋಶ: ಕಚೇರಿಗೆ ಬೀಗ ಜಡಿದು ಪ್ರತಿಭಟನೆ

Update: 2026-08-13 20:36 IST

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ವಲಯ ಕಚೇರಿ–2ರ ಆಯುಕ್ತರಾದ ಪ್ರಭುದ್ಧ ಕಾಂಬಳೆ ಅವರ ಕಾರ್ಯವೈಖರಿ ಹಾಗೂ ಸಿಬ್ಬಂದಿಯೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಖಂಡಿಸಿ, ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಹಾಗೂ ನೌಕರರ ಸಂಘದ ವತಿಯಿಂದ ಗುರುವಾರ ಪಾಲಿಕೆಗೆ ಬೀಗ ಜಡಿದು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಆಯುಕ್ತರು ಸಿಬ್ಬಂದಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಹಾಗೂ ಸಾರ್ವಜನಿಕರ ಎದುರಲ್ಲಿಯೇ ಅಮಾನತು ಮತ್ತು ಲೋಕಾಯುಕ್ತರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಕಂದಾಯ ನಿರೀಕ್ಷಕಿಗೆ ದೂರವಾಣಿ ಮೂಲಕ ಕೆಲಸದ ವಿಚಾರವಾಗಿ ಮಾತನಾಡುವ ಸಂದರ್ಭದಲ್ಲಿ ಅವಾಚ್ಯ ಪದಗಳನ್ನು ಬಳಸಿ ನಿಂದಿಸಲಾಗಿದೆ. ಅದೇ ರೀತಿ ವಲಯ ಕಚೇರಿ–2ರ ಸಿಬ್ಬಂದಿ ಹಾಗೂ ಕರವಸೂಲುಗಾರರೊಂದಿಗೆ ಅವಾಚ್ಯ ಹಾಗೂ ಅವಮಾನಕಾರಿ ರೀತಿಯಲ್ಲಿ ಮಾತನಾಡಿ, ಮಾನಸಿಕವಾಗಿ ನೋವುಂಟು ಮಾಡಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.

ಅಲ್ಲದೆ, ಕಚೇರಿಯ ಎಲ್ಲ ಸಿಬ್ಬಂದಿಗೂ ಕೆಲಸದ ಸಂದರ್ಭದಲ್ಲಿ ಸಾರ್ವಜನಿಕರ ಎದುರೇ ಅಮಾನತು ಮಾಡಿಸುವುದಾಗಿ, ಲೋಕಾಯುಕ್ತರಿಗೆ ದೂರು ನೀಡುವುದಾಗಿ ಹಾಗೂ ನೋಟಿಸ್‌ಗಳನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ಸಿಬ್ಬಂದಿಗಳು ದೂರಿದ್ದಾರೆ.

ಅಧಿಕಾರಿಯನ್ನು ಕೂಡಲೇ ಬಿಡುಗಡೆಗೊಳಿಸದಿದ್ದಲ್ಲಿ, ಅವರನ್ನು ಬಿಡುಗಡೆಗೊಳಿಸುವವರೆಗೆ ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಬೇಕಾಗುತ್ತದೆ ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಪ್ರಹ್ಲಾದ್ ಕುಲಕರ್ಣಿ, ಅಧ್ಯಕ್ಷ ಸುನೀಲ್ ಒಂಟಿ, ಶ್ರೀಶೈಲ, ದೀಪಕ್ ಚವ್ಹಾಣ, ಶರಣಕುಮಾರ್ ತೆಂಗಳಿ, ಜಯಶ್ರೀ ರಾಠೋಡ್, ಬಸವರಾಜ ಪಂಚಕಟ್ಟಿ, ಸಂಗೀತಾ ಸೇರಿದಂತೆ ಪಾಲಿಕೆಯ ವಿವಿಧ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News