Kalaburagi | ಕೆಕೆಆರ್‌ಟಿಸಿ ಕೇಂದ್ರ ಕಚೇರಿಗೆ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಭೇಟಿ
ಕಲಬುರಗಿ: ಕರ್ನಾಟಕ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯ ಅಧ್ಯಕ್ಷ ಅತುಲ್ ಕುಮಾರ್ ತಿವಾರಿ ನೇತೃತ್ವದ ತಂಡ ಗುರುವಾರ ಕಲಬುರಗಿ ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್‌ಟಿಸಿ) ಕೇಂದ್ರ ಕಚೇರಿ, ವಿವಿಧ ಘಟಕಗಳು, ಕೇಂದ್ರ ಬಸ್ ನಿಲ್ದಾಣ ಹಾಗೂ ವಿಭಾಗೀಯ ಕಾರ್ಯಾಗಾರಗಳಿಗೆ ಭೇಟಿ ನೀಡಿ ಸುದೀರ್ಘ ಪರಿಶೀಲನೆ ನಡೆಸಿತು.
ಸಮಿತಿಯ ಸದಸ್ಯರಾದ ಸರ್ಕಾರದ ನಿವೃತ್ತ ಕಾರ್ಯದರ್ಶಿ ದ್ವಾರಕನಾಥ ಬಾಬು ಹಾಗೂ ಡಾ. ಅಬ್ದುಲ್ ಪಿಂಜರಿ ಅವರನ್ನು ಒಳಗೊಂಡ ತಂಡವು ಕೆಕೆಆರ್‌ಟಿಸಿಯ ಕೇಂದ್ರ ಕಚೇರಿ, ಕಲಬುರಗಿ ಘಟಕ-1, ಘಟಕ-2, ಘಟಕ-4, ಕೇಂದ್ರ ಬಸ್ ನಿಲ್ದಾಣ ಹಾಗೂ ವಿಭಾಗೀಯ ಕಾರ್ಯಾಗಾರಗಳಿಗೆ ಭೇಟಿ ನೀಡಿ ನಿಗಮದ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿತು.
ಕೇಂದ್ರ ಕಚೇರಿಯಲ್ಲಿ ಕೆಕೆಆರ್‌ಟಿಸಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಮಿತಿ, ನಿಗಮದ ಒಟ್ಟಾರೆ ಕಾರ್ಯಾಚರಣೆ, ಶಕ್ತಿ ಯೋಜನೆಯ ಅನುಷ್ಠಾನ ಹಾಗೂ ಆರ್ಥಿಕ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದುಕೊಂಡಿತು.
ನಂತರ ವಿವಿಧ ಘಟಕಗಳು ಹಾಗೂ ಕಾರ್ಯಾಗಾರಗಳಿಗೆ ಭೇಟಿ ನೀಡಿದ ಸಮಿತಿಯ ಸದಸ್ಯರು ಬಸ್‌ಗಳ ನಿರ್ವಹಣೆ, ಸ್ವಚ್ಛತೆ, ಡಿಸಿಎಸ್ ತಂತ್ರಾಂಶ ಹಾಗೂ ಸ್ಮಾರ್ಟ್ ಇಟಿಎಂ ಬಳಕೆಯ ಕುರಿತು ಪರಿಶೀಲನೆ ನಡೆಸಿದರು. ಬಸ್‌ಗಳ ಕಾರ್ಯಕ್ಷಮತೆ, ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೇವೆ ಹಾಗೂ ತಾಂತ್ರಿಕ ವ್ಯವಸ್ಥೆಗಳ ಅನುಷ್ಠಾನದ ಬಗ್ಗೆಯೂ ಮಾಹಿತಿ ಪಡೆದರು.
ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಮಿತಿ ಸದಸ್ಯರು ಪ್ರಯಾಣಿಕರು ಹಾಗೂ ಚಾಲನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ಸಾರ್ವಜನಿಕ ಸಾರಿಗೆ ಸೇವೆಯ ಗುಣಮಟ್ಟ, ಪ್ರಯಾಣಿಕರ ಸಮಸ್ಯೆಗಳು ಹಾಗೂ ಸಿಬ್ಬಂದಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸುಶೀಲಾ ಬಿ., ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ ವಿ.ಹೆಚ್., ಮುಖ್ಯ ಯಾಂತ್ರಿಕ ಅಭಿಯಂತರ ಸಂತೋಷ್ ಗೋಗೇರಿ, ಮುಖ್ಯ ಲೆಕ್ಕಾಧಿಕಾರಿ ಬಸವರಾಜ ಬೆಳಗಾವಿ, ಉಪಮುಖ್ಯ ಯೋಜನೆ ಮತ್ತು ಸಂಖ್ಯಾಧಿಕಾರಿ ಜಗದೀಶ ನಾಯಕ ಸೇರಿದಂತೆ ನಿಗಮದ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.