Kalaburagi | ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನಾಸ್ಪದ ಚಟುವಟಿಕೆ ಆರೋಪ: ಓರ್ವನ ಬಂಧನ
ಬಂಧಿತ ಆರೋಪಿ ಮೊಹಮ್ಮದ್ ಸಮೀರ್
ಕಲಬುರಗಿ: ಪಾಕಿಸ್ತಾನ ಮೂಲದ ಸಾಮಾಜಿಕ ಜಾಲತಾಣ ಖಾತೆಗಳನ್ನು ಫಾಲೋ ಮಾಡಿ, ಅವುಗಳಿಗೆ ಪ್ರತಿಕ್ರಿಯೆ ನೀಡುವುದು ಹಾಗೂ ಅನುಮಾನಾಸ್ಪದ ಚಟುವಟಿಕೆಗಳಿಗೆ ಬೆಂಬಲ ನೀಡಿದ ಆರೋಪದ ಮೇರೆಗೆ ಉತ್ತರ ಪ್ರದೇಶ ಮೂಲದ ಯುವಕನೊಬ್ಬನನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮೊಹಮ್ಮದ್ ಸಮೀರ್ (23) ಬಂಧಿತ ಆರೋಪಿ. ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಮೂಲದ ಖಾತೆಗಳನ್ನು ಫಾಲೋ ಮಾಡಿ, ಖಾತೆಗಳ ನಿರ್ವಾಹಕರೊಂದಿಗೆ ಸಂಪರ್ಕ ಹೊಂದಿರುವುದು ಹಾಗೂ ಪ್ರತಿಕ್ರಿಯೆಗಳನ್ನು ನೀಡುತ್ತಿರುವ ಆರೋಪದ ಹಿನ್ನಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿನ ಅನುಮಾನಾಸ್ಪದ ಚಟುವಟಿಕೆಗಳ ಹಿನ್ನೆಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ಓರ್ವ ವ್ಯಕ್ತಿ ಯಾವುದೇ ರೀತಿಯ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂಬುದು ತಿಳಿದುಬಂದಿದೆ. ಮತ್ತೋರ್ವ ಮೊಹಮ್ಮದ್ ಸಮೀರ್ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿನ ಆತನ ಚಟುವಟಿಕೆಗಳ ಕುರಿತು ತನಿಖೆ ಮುಂದುವರಿದಿದ್ದು, ವಿಚಾರಣೆಯ ಬಳಿಕವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.