Kalaburagi | ಜೇವರ್ಗಿ ತಹಶೀಲ್ದಾರ್ ವಿರುದ್ಧ ಹಣದ ಬೇಡಿಕೆ ಆರೋಪ: ಸಿಬ್ಬಂದಿಯಿಂದ ದೂರು
ಕಲಬುರಗಿ : ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಅವರು ತಮ್ಮ ಸಿಬ್ಬಂದಿಯ ಬಳಿ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತಾದ ತಹಶೀಲ್ದಾರ್ ಅವರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನನ್ನ ಹೆಸರಿನಲ್ಲಿ ನೀವು ಹಣ ಸಂಪಾದಿಸುತ್ತಿದ್ದೀರಿ, ಹಾಗಾಗಿ ನನಗೂ ಹಣ ನೀಡಬೇಕು" ಎಂದು ತಹಶೀಲ್ದಾರ್ ಮಲ್ಲಣ್ಣ ಅವರು ಕಂದಾಯ ನಿರೀಕ್ಷಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ತಹಶೀಲ್ದಾರ್ ಅವರ ನಿರಂತರ ಕಿರುಕುಳಕ್ಕೆ ಬೇಸತ್ತ ಸಿಬ್ಬಂದಿ, "ನನಗೆ ಹಣ ನೀಡಲು ಸಾಧ್ಯವಿಲ್ಲ, ನನಗೆ ಕಂದಾಯ ನಿರೀಕ್ಷಕ ಜವಾಬ್ದಾರಿಯೇ ಬೇಡ, ನನ್ನನ್ನು ಕಚೇರಿ ಕೆಲಸಕ್ಕೆ ನಿಯೋಜಿಸಿ" ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಸಂತ್ರಸ್ತ ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ತಹಶೀಲ್ದಾರ್ ಸ್ಪಷ್ಟನೆ :
ಈ ಆರೋಪವನ್ನು ತಳ್ಳಿಹಾಕಿರುವ ತಹಶೀಲ್ದಾರ್ ಮಲ್ಲಣ್ಣ, "ತಿಂಗಳ ಹಿಂದೆ ಕನ್ನಡ ಭವನದಲ್ಲಿ ನಡೆದಿದ್ದ ಕಾರ್ಯಕ್ರಮ ಅಸ್ತವ್ಯಸ್ತಗೊಂಡಿತ್ತು. ಆ ವಿಷಯವಾಗಿ ನಾನು ಸಿಬ್ಬಂದಿಯೊಂದಿಗೆ ಸಭೆಯಲ್ಲಿ ಚರ್ಚಿಸಿದ್ದೇನೆಯೇ ಹೊರತು, ಯಾರಿಗೂ ಹಣಕ್ಕಾಗಿ ಡಿಮ್ಯಾಂಡ್ ಮಾಡಿಲ್ಲ. ಈ ಹಿಂದೆ ಕೆಲಸ ಮಾಡಿದ್ದ ತಹಶೀಲ್ದಾರ್ ಅವರಿಗೂ ದೂರುದಾರ ಸಿಬ್ಬಂದಿ ಬ್ಲ್ಯಾಕ್‌ಮೇಲ್ ಮಾಡಿದ್ದನು. ಈಗ ಅದೇ ರೀತಿ ನನ್ನನ್ನೂ ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾನೆ" ಎಂದು ಸ್ಪಷ್ಟನೆ ನೀಡಿದ್ದಾರೆ.