Kalaburagi | ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
ಸಂಸದ ರಾಧಾಕೃಷ್ಣ ದೊಡ್ಡಮನಿ ಭಾಗಿ
ಕಲಬುರಗಿ: ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮೂಲಕ ಬಿಜೆಪಿ ಸರ್ಕಾರ ಮತಚೋರಿ ನಡೆಸುತ್ತಿದೆ ಎಂದು ಆರೋಪಿಸಿ, ಅವರನ್ನು ಕೂಡಲೇ ಆ ಸ್ಥಾನದಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷ ನವದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಭಾಗವಹಿಸಿದರು.
ಬಿಜೆಪಿ ಹಾಗೂ ಚುನಾವಣಾ ಆಯೋಗ ಸೇರಿಕೊಂಡು ನಡೆಸುತ್ತಿದ್ದಾರೆ ಎನ್ನಲಾದ ಚುನಾವಣಾ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ ಸಂಸದರು, ‘ಪ್ರಜಾಸತ್ತೆಯನ್ನು ರಕ್ಷಿಸಿ’ ಎಂಬ ಫಲಕ ಹಿಡಿದು ಪ್ರತಿಭಟನಾಕಾರರೊಂದಿಗೆ ಘೋಷಣೆಗಳನ್ನು ಕೂಗಿದರು.
ಜ್ಞಾನೇಶ್ ಕುಮಾರ್ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ದೀನದಲಿತರು, ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮೂಲಕ ಸಂವಿಧಾನಬದ್ಧವಾಗಿ ನೀಡಿರುವ ಹಕ್ಕನ್ನು ಕಸಿಯುವ ಪ್ರಯತ್ನ ನಡೆಸಿದ್ದಾರೆ ಎಂದು ರಾಧಾಕೃಷ್ಣ ದೊಡ್ಡಮನಿ ಆರೋಪಿಸಿದರು. ಇದನ್ನು ಕಾಂಗ್ರೆಸ್ ಪಕ್ಷ ಪ್ರಬಲವಾಗಿ ವಿರೋಧಿಸುತ್ತದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ನಡೆಸಲು ಸದಾ ಸಿದ್ಧವಿದೆ. ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಅಧಿಕಾರದಿಂದ ಕೆಳಗಿಳಿಯುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ರಾಧಾಕೃಷ್ಣ ದೊಡ್ಡಮನಿ ಹೇಳಿದರು.