Kalaburagi | ಐಇಟಿಇ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪ್ರೊ.ಬಸವರಾಜ ಗದಗೆ ಅವಿರೋಧ ಆಯ್ಕೆ
ಕಲಬುರಗಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕಲಬುರಗಿ ಪ್ರಾದೇಶಿಕ ಕೇಂದ್ರದ ಮಾಜಿ ನಿರ್ದೇಶಕ ಪ್ರೊ. ಬಸವರಾಜ ಗದಗೆ ಅವರು ಪ್ರತಿಷ್ಠಿತ ಇನ್‌ಸ್ಟಿಟ್ಯೂಷನ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ ಇಂಜಿನಿಯರ್ಸ್ (ಐಇಟಿಇ) ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಲೆಕ್ಟ್ರಾನಿಕ್ಸ್, ಟೆಲಿಕಮ್ಯುನಿಕೇಷನ್ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಪ್ರಮುಖ ವೃತ್ತಿಪರ ಸಂಸ್ಥೆಯಾಗಿರುವ ಐಇಟಿಇಯ ನೂತನ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿಗೆ ಆಯ್ಕೆಯಾದ ಸದಸ್ಯರ ಪಟ್ಟಿಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಡಿ.ಸಿ. ಪಾಂಡೆ ಅವರು ಸೆ. 26ರಂದು ಕೋಲ್ಕತ್ತಾದಲ್ಲಿ ನಡೆದ ಐಇಟಿಇಯ 69ನೇ ವಾರ್ಷಿಕ ಸಮಾವೇಶದಲ್ಲಿ ಪ್ರಕಟಿಸಿದರು.
ಇದೇ ಸಂದರ್ಭದಲ್ಲಿ ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಡಾ. ಶುಭಾಂಗಿ ಡಿ.ಸಿ. ಅವರು ಐಇಟಿಇ ಆಡಳಿತ ಮಂಡಳಿಗೆ ಆಯ್ಕೆಯಾಗಿರುವುದು ಮತ್ತೊಂದು ಗಮನಾರ್ಹ ಸಾಧನೆಯಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಿಂದ ಐಇಟಿಇ ಆಡಳಿತ ಮಂಡಳಿಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಪ್ರೊ. ಬಸವರಾಜ ಗದಗೆ ಹಾಗೂ ಡಾ. ಶುಭಾಂಗಿ ಡಿ.ಸಿ. ಅವರ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರು ಆಶೀರ್ವದಿಸಿ ಅಭಿನಂದಿಸಿದ್ದಾರೆ.