Chitapur | ಜವಾಬ್ದಾರಿ, ಸನ್ಮಾನಗಳು ಬೆಳವಣಿಗೆಗೆ ಸ್ಫೂರ್ತಿ: ಕಾಶಿನಾಥ ಗುತ್ತೇದಾರ
ಚಿತ್ತಾಪುರ: ಜವಾಬ್ದಾರಿಗಳು ಹಾಗೂ ಸನ್ಮಾನಗಳು ಮನುಷ್ಯನ ಬೆಳವಣಿಗೆಗೆ ಸ್ಫೂರ್ತಿ ನೀಡಲಿವೆ ಎಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಅಭಿಮಾನದ ಸನ್ಮಾನ ಸಮಾರಂಭದಲ್ಲಿ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಣ್ಣಗೌಡ ನಾಲವಾರ, ಪಂಚ್ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸುರೇಶ್ ಗುತ್ತೇದಾರ ಹಾಗೂ ಹಿರಿಯ ನಾಗರಿಕರ ಸಂಘದ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಮಹ್ಮದ್ ಇಬ್ರಾಹಿಂ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಜವಾಬ್ದಾರಿಗಳು ಹಾಗೂ ಸನ್ಮಾನಗಳು ಎಲ್ಲರಿಗೂ ದೊರೆಯುವುದಿಲ್ಲ. ಅವು ಸಮರ್ಥರು ಹಾಗೂ ಅರ್ಹರಿಗೆ ಮಾತ್ರ ಸಿಗುತ್ತವೆ. ಸಮಾಜದಲ್ಲಿ ದೊರೆಯುವ ಸನ್ಮಾನಗಳು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ತಾವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರಗಳಲ್ಲಿ ಇನ್ನಷ್ಟು ಬೆಳವಣಿಗೆ ಸಾಧಿಸಲು ಪ್ರೇರಣೆ ನೀಡುತ್ತವೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಸಂಗಣ್ಣಗೌಡ ನಾಲವಾರ, ಸುರೇಶ್ ಗುತ್ತೇದಾರ ಕರದಾಳ ಹಾಗೂ ಮುಹಮ್ಮದ್ ಇಬ್ರಾಹಿಂ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಂತಕುಮಾರ್ ಮಳಖೇಡ, ರಾಜಶೇಖರ್ ಬಳ್ಳಾ, ದೇವಪ್ಪ ನಂದೂರಕರ್, ಹಾಜಿಸಾಬ್ ಮುಲ್ಲಾ, ಜಗನ್ನಾಥ ಬಡಿಗೇರ, ವಿಜಯಕುಮಾರ್ ಭಂಕಲಗಿ, ವಿಠಲ್ ಕಟ್ಟಿಮನಿ, ರವಿಶಂಕರ್ ಬುರ್ಲಿ, ಸಂತೋಷ ಕಟ್ಟಿಮನಿ, ಪ್ರಕಾಶ್ ವಿಶ್ವಕರ್ಮ, ಚಂದ್ರು ಕಾಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ನರಸಪ್ಪ ಚಿನ್ನಕಟ್ಟಿ ನಿರೂಪಿಸಿ, ವಂದಿಸಿದರು.