×
Ad

ಕಲಬುರಗಿ | ಗಾಣಗಾಪೂರದಲ್ಲಿ 'ಸ್ನಾನ ಘಾಟ್' ನಿರ್ಮಾಣ : ಡಿ.ಸಿ ಬಿ.ಫೌಝಿಯಾ ತರನ್ನುಮ್

Update: 2025-05-12 21:39 IST

ಕಲಬುರಗಿ : ಅಫಜಲಪೂರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ಸಂಗಮ ಸ್ಥಳದಲ್ಲಿ ಯಾತ್ರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವಶ್ಯವಿರುವ ಕಡೆಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ 'ಸ್ನಾನ ಘಾಟ್' ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.

ಶ್ರೀ ದತ್ತಾತ್ರೇಯನ ದೇವಸ್ಥಾನ ಅಭಿವೃದ್ದಿ ಕುರಿತಂತೆ ಇತ್ತೀಚೆಗೆ ಅಫಜಲಪೂರ ಶಾಸಕ ಎಂ.ವೈ.ಪಾಟೀಲ ಮತ್ತು ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕರ್ನಾಟಕ ನೀರಾವರಿ ನಿಗಮದಿಂದ ಅನುದಾನ ಪಡೆದು ಸ್ನಾನ್ ಘಾಟ್ ನಿರ್ಮಿಸಲಾಗುವುದು ಎಂದರು.

ಇನ್ನು ಸ್ನಾನ ಘಾಟ್ ನಲ್ಲಿ ಭಕ್ತರು ತೀರ್ಥ ಸ್ನಾನದ‌ ನಂತರ ಸಂಗಮದಲ್ಲಿ ಬಟ್ಟೆ ಬಿಡುತ್ತಿದ್ದು, ಇದು ಜಲ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಜಲ ಮಲೀನವಾಗುವುದನ್ನು ತಡೆಗಟ್ಟಲು ಸದರಿ ಬಟ್ಟೆಗಳನ್ನು ವೈಜ್ಞಾನಿಕವಾಗಿ ಬರ್ನ್ ಮಾಡಲು ಯಂತ್ರ ಖರೀದಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ವಿತರಣೆಗೆ ದಾಸೋಹ ಭವನ ತೆರೆಯಬೇಕು. ಇದಕ್ಕಾಗಿ ದಾನಿಗಳ ನೆರವು ಪಡೆಯಲು ಮತ್ತು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯುವಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಡಿ.ಸಿ. ಅವರು, ಸಾರ್ವಜನಿಕರಿಗೆ "ಪ್ರಸಾದ" ಯೋಜನೆಯಡಿ ದೇವಸ್ಥಾನ ಅಭಿವೃದ್ಧಿಗೆ 83.52 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಯನ್ನು ರೂಪಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದು ಅನುಮೋದನೆಯಾಗಿ ಅನುದಾನ ಬಿಡುಗಡೆಯಾದಲ್ಲಿ ದೇವಸ್ಥಾನ ಮತ್ತು ಗಾಣಗಾಪೂರದ ಅಭಿವೃದ್ಧಿಗೆ ಶುಕ್ರದೆಸೆ ಬರಲಿದೆ‌ ಎಂದು ತಿಳಿಸಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಉಪನಿರ್ದೇಶಕಿ ಅನುಸುಯಾ ಹೂಗಾರ, ಅಫಜಲಪೂರ ತಹಶೀಲ್ದಾರ್‌ ಸಂಜೀವಕುಮಾರ ದಾಸರ್, ಲೊಕೋಪಯೋಗಿ ಇಲಾಖೆಯ ಎಇಇ ಲಕ್ಷ್ಮಿಕಾಂತ ನಾಯಕ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News